ವಿದೇಶಿ ಪ್ರವಾಸಗಳಲ್ಲಿ ಕ್ರಿಕೆಟಿಗರಿಗೆ ದುಶ್ಚಟಗಳು; ರಿವಾಬಾ ಜಡೇಜಾ ಆರೋಪ
ಅಹಮದಾಬಾದ್, ಡಿ. 12: ವಿದೇಶಿ ಪ್ರವಾಸಗಳ ವೇಳೆ ಕೆಲ ಭಾರತೀಯ ಕ್ರಿಕೆಟಿಗರು ದುಶ್ಚಟಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ಗುಜರಾತ್ ಸರ್ಕಾರದ ಸಚಿವೆ ಹಾಗೂ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ, ತಮ್ಮ ಪತಿ ಈ ರೀತಿಯ ಯಾವುದೇ ಅಭ್ಯಾಸಗಳಿಗೆ ಒಳಗಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿವಾಬಾ ಜಡೇಜಾ, ಕ್ರಿಕೆಟಿಗರ ಜೀವನದ ಹಲವು ಅಂಶಗಳು ಸಾರ್ವಜನಿಕ ಗಮನಕ್ಕೆ ಬರುವುದಿಲ್ಲ ಎಂದು ಹೇಳಿದರು. “ಕ್ರಿಕೆಟ್ ಆಡಲು ರವೀಂದ್ರ ಜಡೇಜಾ ಲಂಡನ್, ದುಬೈ, ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಿಗೆ ಪ್ರಯಾಣಿಸುತ್ತಾರೆ. ಆದರೂ, ಅವರು ಇದುವರೆಗೂ ಯಾವುದೇ ದುಶ್ಚಟಗಳಿಗೆ ಒಳಗಾಗಿಲ್ಲ. ತಮ್ಮ ವೃತ್ತಿಪರ ಜವಾಬ್ದಾರಿಯನ್ನು ಅರಿತು ಶಿಸ್ತಿನ ಬದುಕು ನಡೆಸುತ್ತಿದ್ದಾರೆ,” ಎಂದು ಅವರು ಹೇಳಿದರು.
ಇದೇ ವೇಳೆ, ತಂಡದ ಕೆಲ ಆಟಗಾರರು ದುಶ್ಚಟಗಳಿಗೆ ಒಳಗಾಗಿರುವುದನ್ನೂ ಅವರು ಉಲ್ಲೇಖಿಸಿದರು. ವಿದೇಶಿ ಪ್ರವಾಸಗಳ ಸಂದರ್ಭದಲ್ಲಿನ ಸಾಮಾಜಿಕ ಪರಿಸರವು ಕೆಲವೊಮ್ಮೆ ಇಂತಹ ಪ್ರವೃತ್ತಿಗಳಿಗೆ ಕಾರಣವಾಗಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. “ವೃತ್ತಿಜೀವನದಲ್ಲಿ ಮುನ್ನಡೆದ ಬಳಿಕವೂ ಸಾಂಸ್ಕೃತಿಕ ಮೌಲ್ಯಗಳನ್ನು ಮರೆಯಬಾರದು. ಶಿಸ್ತು ಮತ್ತು ಜವಾಬ್ದಾರಿ ಕ್ರೀಡಾಪಟುಗಳ ಬದುಕಿನಲ್ಲಿ ಅತ್ಯಂತ ಅಗತ್ಯ,” ಎಂದು ಅವರು ಹೇಳಿದರು.
ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ಹುಟ್ಟುಹಾಕಿದ್ದು, ಕೆಲವರು ಟೀಕೆ ವ್ಯಕ್ತಪಡಿಸಿದರೆ, ಮತ್ತಿತರರು ವೈಯಕ್ತಿಕ ಅಭಿಪ್ರಾಯವೆಂದು ಸಮರ್ಥಿಸಿದ್ದಾರೆ.
ಕ್ರಿಕೆಟಿಗರ ನಡವಳಿಕೆಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ಘಟನೆಗಳನ್ನೂ ಇಲ್ಲಿ ಸ್ಮರಿಸಬಹುದು. 2016ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಮದ್ಯದ ಬಾಟಲಿ ಹಿಡಿದಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪ್ರಕರಣ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಆಟಗಾರರು ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕೆಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೂಚನೆ ನೀಡಿತ್ತು.
ಇನ್ನೊಂದೆಡೆ, 2024ರ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ತಂಬಾಕು ಹಾಗೂ ಮದ್ಯ ಉತ್ಪನ್ನಗಳ ಜಾಹೀರಾತಿನಲ್ಲಿ ಕ್ರೀಡಾಪಟುಗಳು ಭಾಗವಹಿಸುವುದನ್ನು ನಿರ್ಬಂಧಿಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ನಿರ್ದೇಶನ ನೀಡಿದೆ.
ಗಾಯದಿಂದ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ ಜನವರಿ 11ರಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೂಲಕ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ.
