ಸೊಸೆಯಿಂದ ಅತ್ತೆಯ ಮೇಲೆ ತೀವ್ರ ಹಲ್ಲೆ; ಕರೆದರೂ ನೆರವಿಗೆ ಬಾರದೆ ವಿಡಿಯೋ ಚಿತ್ರೀಕರಿಸಿದ ಮಗ!
ಗುರುದಾಸ್ಪುರ (ಪಂಜಾಬ್): ಗುರುದಾಸ್ಪುರ ಜಿಲ್ಲೆಯ ಕೋಥೆ ಗ್ರಾಮದಲ್ಲಿ ಸೊಸೆ ತನ್ನ ವೃದ್ಧ ಅತ್ತೆಗೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿಂಸಾತ್ಮಕ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಪಂಜಾಬ್ ಮಹಿಳಾ ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ತನಿಖೆಗೆ ಸೂಚನೆ ನೀಡಿದೆ.
ವೈರಲ್ ದೃಶ್ಯದಲ್ಲಿ ಹರ್ಜೀತ್ ಕೌರ್ ಎಂಬ ಮಹಿಳೆ, ಅತ್ತೆ ಗುರ್ಬಚನ್ ಕೌರ್ ಅವರನ್ನು ತಲೆ ಮೇಲೆ ಹೊಡೆದು ನಿಂದಿಸುತ್ತಿರುವುದು ಸೆರೆಯಾಗಾದೆ. ವೃದ್ಧೆ ಮಗನನ್ನು ರಕ್ಷಣೆಗಾಗಿ ಪದೇಪದೇ ವಿನಂತಿಸಿದರೂ ಮಗ ನೆರವಿಗೆ ಬರಲಿಲ್ಲ. ಆತ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ.
ಸಂತ್ರಸ್ತೆ ಗುರ್ಬಚನ್ ಕೌರ್ ಅವರು, ನಾಲ್ಕು ತಿಂಗಳ ಹಿಂದೆ ನಿವೃತ್ತ ಬ್ಲಾಕ್ ಪ್ರಾಥಮಿಕ ಶಿಕ್ಷಣ ಅಧಿಕಾರಿ ಆಗಿದ್ದ ತಮ್ಮ ಪತಿ ನಿಧನರಾದ ಬಳಿಕ ಸೊಸೆಯ ದೌರ್ಜನ್ಯ ಹೆಚ್ಚಾಗಿದ್ದು, ಆಸ್ತಿ ತಮ್ಮ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದಾರೆ. ಘಟನೆಯ ದಿನ ತಮ್ಮ ಮೇಲೆ ನಡೆದ ಹಲ್ಲೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸಿದಾಗ, ಹರ್ಜೀತ್ ಕೌರ್ ಫೋನ್ ಕಸಿದುಕೊಂಡು ಮತ್ತಷ್ಟು ಹಲ್ಲೆ ನಡೆಸಿದಳು ಎಂದು ಕಣ್ಣೀರು ಹಾಕಿದರು.
ಘಟನೆಯನ್ನು ಬಗ್ಗೆ ಮೊಮ್ಮಗ ಚರತ್ವೀರ್ ಸಿಂಗ್ ಹೇಳಿಕೆ ನೀಡಿದ್ದು, ತಾಯಿ ಮದ್ಯವ್ಯಸನಿಯಾಗಿದ್ದಾಳೆಹ ಅಜ್ಜಿ ಹಾಗೂ ತಂದೆ ಇಬ್ಬರ ಮೇಲೂ ನಿರಂತರವಾಗಿ ಹಲ್ಲೆ ನಡೆಸುತ್ತಾಳೆ ಎಂದು ಆರೋಪಿಸಿದ್ದಾರೆ. ಹಲವಾರು ಬಾರಿ ಪೊಲೀಸರಿಗೆ ದೂರು ನೀಡಿದರೂ ಎಚ್ಚರಿಕೆಗೆ ಮಾತ್ರ ನೀಡುತ್ತಾರೆ. ಆದ್ರೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳಾ ಆಯೋಗವು ಗುರುದಾಸ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು, ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.