ಲಿವ್ ಇನ್ ಸಂಬಂಧದಲ್ಲಿ ವೈಮನಸ್ಸು | ಪ್ರೇಯಸಿಯಿಂದಲೇ ಪ್ರಿಯಕರನ ಕತ್ತು ಹಿಸುಕಿ ಹತ್ಯೆ
ವಿಜಯಪುರ, ನ. 17: ನಗರದ ಅಮನ್ ಕಾಲೋನಿಯಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ಮಹಿಳೆಯೇ ತನ್ನ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ಹತ್ಯೆಗೊಳಗಾದ ಯುವಕನನ್ನು ಸಮೀರ್ ಅಲಿಯಾಸ್ ಪಿಕೆ ಇನಾಂದಾರ್ (26) ಎಂದು ಗುರುತಿಸಲಾಗಿದೆ. ಆರೋಪಿ ಪ್ರೇಯಸಿ ತಯ್ಯಾಬಾ ಮತ್ತು ಆಕೆಯ ಸಹೋದರ ಅಸ್ಲಮ್ ಭಾಗವಾನ್ ಅವರನ್ನು ಗೋಲಗುಂಬಜ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಸೋಮವಾರ ಬೆಳಿಗ್ಗೆ ತಯ್ಯಾಬಾ ನೇರವಾಗಿ ಗೋಲಗುಂಬಜ್ ಪೊಲೀಸ್ ಠಾಣೆಗೆ ಬಂದು,
“ನಾನು ನನ್ನ ಪ್ರಿಯಕರನನ್ನು ಕತ್ತು ಹಿಸುಕಿ ಕೊಂದಿದ್ದೇನೆ. ಕೊಲೆ ಮಾಡಲು ನನ್ನ ಸಹೋದರ ಸಹಾಯ ಮಾಡಿದ” ಎಂದು ಹೇಳಿಕೊಂಡಿದ್ದಾಳೆ.
ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸಮೀರ್‌ನ್ನು ರಾತ್ರಿ 11ರಿಂದ 12 ಗಂಟೆಯ ನಡುವೆ ಹತ್ಯೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗುತ್ತಾಗಿದೆ.
ಕೊಲೆ ನಡೆದ ನಂತರ ಶವವನ್ನು ಮನೆಯಲ್ಲೇ ಇಟ್ಟುಕೊಂಡು ಬೆಳಗಿನವರೆಗೆ ಕಾದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಿಗ್ಗೆ 8 ಗಂಟೆಯ ಸುಮಾರಿಗೆ ತಯ್ಯಾಬಾ ಠಾಣೆಗೆ ಬಂದು ಮಾಹಿತಿಯನ್ನು ನೀಡಿದ ನಂತರ ಪ್ರಕರಣ ಬಹಿರಂಗವಾಯಿತು.
ಮನೆಯ ಮಾಲೀಕ ಅಬ್ದುಲ್ ಜಮಾದಾರ್ ಹೇಳುವಂತೆ, 5–6 ತಿಂಗಳ ಹಿಂದೆ ತಯ್ಯಾಬಾ ಸಹೋದರಿಗೆ ಮನೆ ಬಾಡಿಗೆಗೆ ನೀಡಲಾಗಿತ್ತು. ಸಮೀರ್ ಆಗಾಗ್ಗೆ ಮನೆಗೆ ಬರುತ್ತಿದ್ದ. ಆದರೆ ಯಾವುದೇ ಗಲಾಟೆ ನಡಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಿರುಕುಳವೇ ಕೊಲೆಗೆ ಕಾರಣ?
ಪೊಲೀಸ್ ಮೂಲಗಳ ಪ್ರಕಾರ, ಸಮೀರ್ ರೌಡಿ ಶೀಟರ್ ಆಗಿದ್ದು, ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಕಳೆದ ನಾಲ್ಕು ವರ್ಷಗಳಿಂದ ತಯ್ಯಾಬಾ ಮತ್ತು ಸಮೀರ್ ನಡುವಿನ ಸಂಬಂಧ ಮುಂದುವರಿದಿದ್ದರೂ, ಕಳೆದ ಒಂದು ವರ್ಷದಲ್ಲಿ ಮನಸ್ತಾಪ ಉಂಟಾಗಿತ್ತು.
ನಂತರ ಮತ್ತೆ ಒಟ್ಟಾಗಿದ್ದರೂ, ಸಮೀರ್ ತಯ್ಯಾಬಾಗೆ ನಿರಂತರ ಕಿರುಕುಳ ನೀಡುತ್ತಿದ್ದನೆಂಬ ಮಾಹಿತಿ ದೊರೆತಿದ್ದು, ಇದೇ ಕಾರಣಕ್ಕೆ ತಯ್ಯಾಬಾ ಸಹೋದರನ ಸಹಾಯದಿಂದ ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸಮೀರ್ ತಂದೆ, “ನನ್ನ ಮಗನನ್ನು ನಾಲ್ಕು ಜನರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
