ಕೂಡಿಗೆ, ಕೂಡುಮಂಗಳೂರು ಗ್ರಾ.ಪಂ.ನಲ್ಲಿ ಗಣತಿದಾರರಿಗೆ ಕಿಟ್ ವಿತರಣೆ

ಕೂಡಿಗೆ, ಕೂಡುಮಂಗಳೂರು ಗ್ರಾ.ಪಂ.ನಲ್ಲಿ ಗಣತಿದಾರರಿಗೆ ಕಿಟ್ ವಿತರಣೆ

ಕೂಡಿಗೆ/ ಕೂಡುಮಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ: 2025 ಕ್ಕೆ ಕೂಡಿಗೆ ಹಾಗೂ ಕೂಡುಮಂಗಳೂರು ಗ್ರಾಮ ಪಂಚಾಯತಿ ವತಿಯಿಂದ ಸೋಮವಾರ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯತಿ ಕಛೇರಿಯಲ್ಲಿ ಸಮೀಕ್ಷಾ ಕಾರ್ಯದ ಪೂರ್ವ ಸಿದ್ದತಾ ಸಮಾಲೋಚನಾ ಸಭೆ ನಡೆಸುವ ಮೂಲಕ ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ನಡೆಸುವ ಕುರಿತು ಸಮಾಲೋಚನೆ ನಡೆಸಲಾಯಿತು.

ಕೂಡುಮಂಗಳೂರು ಗ್ರಾಮ ಪಂಚಾಯತಿ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಲು ನಿಯೋಜನೆಗೊಂಡಿರುವ 30 ಕ್ಕೂ ಹೆಚ್ಚು ಶಿಕ್ಷಕರಿಗೆ ಸಮೀಕ್ಷೆ ನಡೆಸಲು ಬೇಕಾದ ಕೈಪಿಡಿ ಸೇರಿದಂತೆ ಪೂರಕ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ಕೂಡುಮಂಗಳೂರು ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಎಂ.ಆರ್.ಸಂತೋಷ್ ಗಣತಿದಾರ ಶಿಕ್ಷಕರಿಗೆ ವಿತರಿಸಿದರು.

 ಈ ಸಂದರ್ಭ ಮಾತನಾಡಿದ ಪಿಡಿಓ ಸಂತೋಷ್, ಮಹತ್ವಾಕಾಂಕ್ಷೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಶಿಕ್ಷಕರಿಗೆ ಮನವಿ ಮಾಡಿದರು. ಸಮೀಕ್ಷೆ ಸಂದರ್ಭದಲ್ಲಿ ಯಾವುದೇ ಮಾಹಿತಿ ಬೇಕಾದಲ್ಲಿ ಮತ್ತು ಏನಾದರೂ ಸಮಸ್ಯೆಗಳು ಎದುರಾದಲ್ಲಿ ಗ್ರಾಮ ಪಂಚಾಯತಿ ಗಮನಕ್ಕೆ ತಂದಲ್ಲಿ ತಕ್ಷಣದಲ್ಲಿ ಪರಿಹರಿಸುವ ಮೂಲಕ ಗಣತಿ ಕಾರ್ಯಜ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಸಮೀಕ್ಷಾ ಕಾರ್ಯ ನಡೆಸುವ ಕುರಿತು ಮಾಹಿತಿ ನೀಡಿದ ಕೂಡಿಗೆ ಕ್ಲಸ್ಟರ್ ಕೇಂದ್ರದ ಸಂಪನ್ಮೂಲ ವ್ಯಕ್ತಿ ಕೆ.ಶಾಂತಕುಮಾರ್, ಸಮೀಕ್ಷಾ ಕಾರ್ಯ ಕೈಗೊಳ್ಳಲು ಆ್ಯಪ್ ಬಳಕೆ ಮತ್ತು ಸಮೀಕ್ಷೆಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಒಳಗೊಂಡ ಮಾಹಿತಿಯನ್ನು ವಿವರಿಸಿದರು.

ಕೂಡಿಗೆ ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿ ಮಂಜುಳ ಅವರು ಗಣತಿದಾರ ಶಿಕ್ಷಕರಿಗೆ ಕಿಟ್ ವಿತರಿಸಿ ಮಾತನಾಡಿ, ಈ ಸಮೀಕ್ಷೆ ಕುರಿತು ಈಗಾಗಲೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಜನಜಾಗೃತಿ ಮೂಡಿಸಲಾಗುತ್ತಿದ್ದು, ನಾವೆಲ್ಲರೂ ಸೇರಿ ಈ ಗಣತಿ ಸಮೀಕ್ಷೆಯನ್ನು ಯಶಸ್ವಿಗೊಳಿಸೋಣ ಎಂದರು. ಇದೇ ವೇಳೆ ಸಮೀಕ್ಷೆಗೆ ನಿಯೋಜನೆಗೊಂಡಿರುವ ಗಣತಿದಾರ ಶಿಕ್ಷಕರಿಗೆ ಸಮೀಕ್ಷಾ ಕಿಟ್ ವಿತರಿಸಲಾಯಿತು. ಸಮೀಕ್ಷೆಗೆ ನಿಯೋಜನೆಗೊಂಡಿರುವ ಶಿಕ್ಷಕರು ತಾವು ಸಮೀಕ್ಷೆಯನ್ನು ನಡೆಸಲಿರುವ ಜನವಸತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಗೂಗಲ್ ಮೂಲಕ ನಕ್ಷೆ ಪಡೆದು ಗಣತಿ ಮಾಡಬೇಕಾದ ಮನೆಗಳ ವಿವರಗಳನ್ನು ಹೇಗೆ ಪಡೆಯಬೇಕು ಎಂಬ ಬಗ್ಗೆ ಸಿ ಆರ್ ಪಿ ಶಾಂತಕುಮಾರ್ ವಿವರಿಸಿದರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್, ಮುಖ್ಯ ಶಿಕ್ಷಕಿಯವರಾದ ಶಶಿಕಲಾ, ಎಚ್.ಎಸ್.ಸುಜಾತ, ಬಿ.ಟಿ.ಕುಸುಮ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.