ಸೀನಿಯರ್ ಗಳ ಹಿಂಸೆ ತಾಳಲಾರದೆ ಸಾಯುವ ಮುನ್ನ ಸಹೋದರಿಯೊಂದಿಗೆ ಸೈನಿಕ್ ಶಾಲಾ ವಿದ್ಯಾರ್ಥಿ ಹೇಳಿದ್ದೇನು ಗೊತ್ತೇ!

ಸೀನಿಯರ್ ಗಳ ಹಿಂಸೆ ತಾಳಲಾರದೆ ಸಾಯುವ ಮುನ್ನ ಸಹೋದರಿಯೊಂದಿಗೆ ಸೈನಿಕ್ ಶಾಲಾ ವಿದ್ಯಾರ್ಥಿ ಹೇಳಿದ್ದೇನು ಗೊತ್ತೇ!
Photo credit: INDIA TODAY (ಸಾಂದರ್ಭಿಕ ಚಿತ್ರ)

ಇಟಾನಗರ: ಅರುಣಾಚಲ ಪ್ರದೇಶದ ಸೈನಿಕ್ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣವು ಸಂಚಲನ ಮೂಡಿಸಿದ್ದು, ಮೃತ ಬಾಲಕನ ಸಹೋದರಿ ಹಿರಿಯ ವಿದ್ಯಾರ್ಥಿಗಳಿಂದ ನಿರಂತರ ಹಿಂಸೆ ನೀಡಲಾಗಿತ್ತೆಂದು ಗಂಭೀರ ಆರೋಪ ಮಾಡಿದ್ದಾರೆ. ಈ ಶಂಕಿತ ರ್ಯಾಗಿಂಗ್ ಪ್ರಕರಣದ ಹಿನ್ನೆಲೆ ಪೊಲೀಸರು ಎಂಟು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಪೂರ್ವ ಸಿಯಾಂಗ್ ಜಿಲ್ಲೆಯ ನಿಗ್ಲೋಕ್ ಸೈನಿಕ್ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯ ಮೃತದೇಹವು ನವೆಂಬರ್ 1ರಂದು ಶಾಲಾ ಆವರಣದಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕವಾಗಿ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿತ್ತು. ಇದೀಗ ಹೊಸ ಆರೋಪಗಳು ಬೆಳಕಿಗೆ ಬಂದಿವೆ.

ಮೃತ ಬಾಲಕನ ಸಹೋದರಿ ಹಾಗೂ ಮಿಸ್ ಅರುಣಾಚಲ 2024ರ ವಿಜೇತೆ ತಡು ಲೂನಿಯಾ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿ, “ಸಾವಿನ ನಿಜವಾದ ಕಾರಣ ಹಿಂಸೆ ಮತ್ತು ಬೆದರಿಕೆ. ‘ಸೀನಿಯರ್ ಗಳು ನನ್ನನ್ನು ತುಂಬಾ ಹಿಂಸಿಸಿದ್ದಾರೆ, ನಾನು ಈಗ ಏನು ಮಾಡಬೇಕು ಗೊತ್ತಿಲ್ಲ’ ಎಂಬುದು ಆತನ ಕೊನೆಯ ಮಾತಾಗಿತ್ತು,” ಎಂದು ಭಾವುಕರಾಗಿ ಹೇಳಿದ್ದಾರೆ.

ಅವರ ಪ್ರಕಾರ, ಅಕ್ಟೋಬರ್ 31ರ ರಾತ್ರಿ 10ನೇ ತರಗತಿಯ ಎಂಟು ಮಂದಿ ಮತ್ತು 8ನೇ ತರಗತಿಯ ಮೂವರು ಹಿರಿಯ ವಿದ್ಯಾರ್ಥಿಗಳು ರಾತ್ರಿ 11 ಗಂಟೆಯ ನಂತರ 7ನೇ ತರಗತಿಯ ವಸತಿ ನಿಲಯಕ್ಕೆ ನುಗ್ಗಿದ್ದಾರೆ. ಆ ವೇಳೆ ಯಾವುದೇ ಮೇಲ್ವಿಚಾರಕರು ಇರಲಿಲ್ಲ. ಅವರು ಕಿರಿಯ ವಿದ್ಯಾರ್ಥಿಗಳನ್ನು ಕಂಬಳಿಯಿಂದ ಮುಚ್ಚುವಂತೆ ಬಲವಂತ ಪಡಿಸಿ, ಮೃತ ಬಾಲಕನನ್ನು ಒಂಟಿಯಾಗಿ ಕರೆದೊಯ್ದಿದ್ದಾರೆ.

“ಆ ಮುಚ್ಚಿದ ಬಾಗಿಲಿನ ಹಿಂದೆ ಏನಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿತ್ತೆಂದು ಹೇಳಿದ್ದಾರೆ,” ಎಂದು ಲೂನಿಯಾ ಆರೋಪಿಸಿದ್ದಾರೆ.

ಕಾಣೆಯಾದ ಪುಸ್ತಕದ ಕುರಿತು ಬಾಲಕನನ್ನು “ಕಳ್ಳ” ಎಂದು ವೀಡಿಯೊ ರೆಕಾರ್ಡಿಂಗ್ ಮೂಲಕ ಅವಮಾನ ಮಾಡುವ ಬೆದರಿಕೆ ನೀಡಲಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ.

ತನಿಖಾಧಿಕಾರಿಗಳು ಪರಿಶೀಲಿಸಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬೆಳಿಗ್ಗೆ 5.45ರ ಸುಮಾರಿಗೆ ಬಾಲಕ ಆತಂಕದಿಂದ ವಸತಿ ನಿಲಯದ ಸುತ್ತ ಓಡಾಡುತ್ತಿರುವುದು ಕಾಣಿಸಿಕೊಂಡಿದೆ.

ಈ ಕುರಿತ ತನಿಖೆಯ ನಿಧಾನಗತಿಯ ಬಗ್ಗೆ ತಡು ಲೂನಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬಾರದಿರುವುದು ಆತಂಕಕಾರಿ. ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ; ಯಾವುದೇ ಬಾಹ್ಯ ಒತ್ತಡದಿಂದ ತನಿಖೆ ತಿರುಗಬಾರದು,” ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಎಂಟು ವಿದ್ಯಾರ್ಥಿಗಳನ್ನು ಮಂಗಳವಾರ ಪಾಸಿಘಾಟ್‌ನ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಮಂಡಳಿಯು ಅವರನ್ನು ಶಾಲೆಯ ಉಪಪ್ರಾಂಶುಪಾಲರ ಕಸ್ಟಡಿಗೆ ಏಳು ದಿನಗಳ ಕಾಲ ಒಪ್ಪಿಸಿದೆ.

ಪ್ರಾರಂಭದಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 194 ಅಡಿಯಲ್ಲಿ ರಕ್ಸಿನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ನವೆಂಬರ್ 3ರಂದು ಮೃತ ಬಾಲಕನ ತಂದೆ ರ‍್ಯಾಗಿಂಗ್ ಕುರಿತಾಗಿ ಹೆಚ್ಚುವರಿ ಎಫ್‌ಐಆರ್ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಬಾಲಕನ ಸಾವಿನ ನಿಜವಾದ ಕಾರಣ ಪತ್ತೆಹಚ್ಚಲು ಸಮಗ್ರ ತನಿಖೆ ನಡೆಯುತ್ತಿದ್ದು, ನ್ಯಾಯಯುತ ತೀರ್ಮಾನಕ್ಕೆ ತಲುಪುವವರೆಗೆ ತನಿಖೆ ಮುಂದುವರಿಯಲಿದೆ,” ಎಂದು ಅರುಣಾಚಲ ಪ್ರದೇಶ ಪೊಲೀಸರು ತಿಳಿಸಿದ್ದಾರೆ.