ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣ: ಮಹೇಂದ್ರ ರೆಡ್ಡಿಯ ತನ್ನ ಲವ್ವರ್ ಗೆ ಕಳುಹಿಸಿದ್ದ ಸಂದೇಶವೇನು ಗೊತ್ತಾ?
ಬೆಂಗಳೂರು, ನ.03: ಡಾ. ಕೃತಿಕಾ ರೆಡ್ಡಿಯ ಕೊಲೆ ಪ್ರಕರಣದಲ್ಲಿ ಹೊಸ ಹೊಸ ಅಂಶಗಳು ಬಯಲಾಗುತ್ತಿದ್ದು, ಆರೋಪಿ ವೈದ್ಯ ಮಹೇಂದ್ರ ರೆಡ್ಡಿಯ ಮೊಬೈಲ್ ಡೇಟಾದಿಂದ ಬಹಳಷ್ಟು ಮಾಹಿತಿಗಳು ಹೊರಬಿದ್ದಿದೆ.
ಮಹೇಂದ್ರ ರೆಡ್ಡಿಯು ತನ್ನ ಆಪ್ತ ಸ್ನೇಹಿತೆಯೊಂದಿಗೆ ಚಾಟ್ ಮಾಡುತ್ತಿದ್ದ ಸಂದರ್ಭದಲ್ಲಿ “I killed my wife... because of u” ಎಂದು ಫೋನ್‌ಪೇ ಆಪ್ ಮೂಲಕ ಸಂದೇಶ ಕಳುಹಿಸಿದ್ದಾನೆಂಬುದು ತನಿಖೆಯಿಂದ ಬಹಿರಂಗವಾಗಿದೆ. ಸ್ನೇಹಿತೆಯು ಮಹೇಂದ್ರ ರೆಡ್ಡಿಯನ್ನು ಬ್ಲಾಕ್ ಮಾಡಿದ್ದಕ್ಕೆ ಆತ ಫೋನ್ ಪೇ ಬಳಸಿ ಸಂದೇಶ ಕಳುಹಿಸುತ್ತಿದ್ದ ಎನ್ನಲಾಗಿದೆ. ಬಳಿಕ ಆ ಸಂದೇಶ ಅಳಿಸಲು ಪ್ರಯತ್ನಿಸಿದರೂ ಸಾಧ್ಯವಾಗದಿರುವುದನ್ನು ಪೊಲೀಸರು ಅದನ್ನು ಪತ್ತೆಹಚ್ಚಿದ್ದಾರೆ.
ಆರೋಪಿಯ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ಅಲ್ಲಿ ಚಾಟ್ ಹಿಸ್ಟರಿ, ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಮಹೇಂದ್ರ ರೆಡ್ಡಿಯು ತನ್ನ ಸ್ನೇಹಿತೆಯೊಂದಿಗೆ ವೈಯಕ್ತಿಕ ವಿಚಾರಗಳ ಕುರಿತೂ ನಿರಂತರ ಚಾಟ್ ಮಾಡುತ್ತಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಯುವತಿಯನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಮಾಹಿತಿ ಪ್ರಕಾರ, ಡಾ. ಕೃತಿಕಾ ರೆಡ್ಡಿಯು ಕೆಲವು ಕಾಲದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪತ್ನಿಯ ಆರೋಗ್ಯ ಸ್ಥಿತಿಗೆ ಬೇಸತ್ತು “ನನಗೆ ವೈಯಕ್ತಿಕ ಜೀವನವೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಮಹೇಂದ್ರ ರೆಡ್ಡಿ, ವಿಚ್ಛೇದನ ಪಡೆದರೆ ಏನೂ ಸಿಗದು ಎಂಬ ಕಾರಣದಿಂದ ಕೊಲೆಯ ಸಂಚು ರೂಪಿಸಿದ್ದಾನೆಂದು ತನಿಖಾ ಮೂಲಗಳು ತಿಳಿಸಿವೆ.
ಆ ದಿನ ಕೃತಿಕಾ ರೆಡ್ಡಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಅನಸ್ತೇಶಿಯಾ ನೀಡಲಾಗಿದೆ. ವೈದ್ಯಕೀಯವಾಗಿ ಕೇವಲ 7–8 ಎಂ.ಎಲ್. ಸಾಕಾಗುತ್ತಿದ್ದರೂ, ಆರೋಪಿಯು 15 ಎಂ.ಎಲ್. ನೀಡಿದ್ದಾನೆ. ಇದರಿಂದಲೇ ಆಕೆಯ ಸಾವಿಗೆ ಕಾರಣವಾಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹತ್ಯೆಯ ನಂತರ ಅದನ್ನು ಸಹಜ ಸಾವು ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದಾನೆ. ಈಗ ಆರೋಪಿಯ ಯೋಜನೆ ಒಂದೊಂದೇ ಬಯಲಾಗುತ್ತಿದ್ದರೆ, ಪೊಲೀಸರು ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.
