ಮದುವೆ ಮಾತುಕತೆಯ ನೆಪದಲ್ಲಿ ಕರೆದು ಎಂಜಿನಿಯರಿಂಗ್ ವಿದ್ಯಾರ್ಥಿಯ ಹತ್ಯೆ: ಯುವತಿಯ ಪೋಷಕರರಿಂದ ಕೃತ್ಯ?

ಮದುವೆ ಮಾತುಕತೆಯ ನೆಪದಲ್ಲಿ ಕರೆದು ಎಂಜಿನಿಯರಿಂಗ್ ವಿದ್ಯಾರ್ಥಿಯ ಹತ್ಯೆ: ಯುವತಿಯ ಪೋಷಕರರಿಂದ ಕೃತ್ಯ?
Photo credit:NDTV (ಫೋಟೋ:Sharvan)

ಸಂಗರೆಡ್ಡಿ, ಡಿ. 11: ಮಗಳನ್ನು ಪ್ರೀತಿಸಿದ್ದಾನೆಂಬ ಕಾರಣಕ್ಕೆ ಯುವಕನ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಯುವತಿಯ ಪೋಷಕರು, ಮದುವೆ ಮಾತುಕತೆಯ ನೆಪದಲ್ಲಿ ಮನೆಗೆ ಕರೆದು ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿಯನ್ನು ಹಲ್ಲೆ ಮಾಡಿ ಹತ್ಯೆ ಮಾಡಿದ ಘಟನೆ ಸಂಗರೆಡ್ಡಿಯಲ್ಲಿ ನಡೆದಿದೆ.

ಮೃತನನ್ನು ಜ್ಯೋತಿ ಶ್ರವಣ್ ಸಾಯಿ (19) ಎಂದು ಗುರುತಿಸಲಾಗಿದ್ದು, ಮೈಸಮ್ಮಗುಡದ ಸೇಂಟ್ ಪೀಟರ್ಸ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ. ಆತ ಕುತುಬುಲ್ಲಾಪುರದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ. ಬೀರಮ್‌ಗುಡದ ಇಸುಕಬಾವಿ ನಿವಾಸಿ 19 ವರ್ಷದ ಶ್ರೀಜಾ ಎಂಬ ಯುವತಿಯನ್ನು ಶ್ರವಣ್ ಪ್ರೀತಿಸುತ್ತಿದ್ದನು. ಈ ಸಂಬಂಧಕ್ಕೆ ಶ್ರೀಜಾ ಕುಟುಂಬದಿಂದ ತೀವ್ರ ವಿರೋಧವಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.

ಅಮೀನ್‌ಪುರ ಸರ್ಕಲ್ ಇನ್ಸ್‌ಪೆಕ್ಟರ್ ನರೇಶ್ ನೀಡಿದ ಮಾಹಿತಿಯ ಪ್ರಕಾರ, “ಮದುವೆ ಬಗ್ಗೆ ಮಾತನಾಡಬೇಕಿದೆ” ಎಂದು ಕರೆಸಿಕೊಂಡ ಕುಟುಂಬ, ಶ್ರವಣ್ ಮನೆಗೆ ಆಗಮಿಸಿದ ತಕ್ಷಣವೇ ಹಠಾತ್ತನೆ ದಾಳಿ ನಡೆಸಿದೆ. ಶ್ರೀಜಾಳ ತಾಯಿ ಸೇರಿ ಕುಟುಂಬದ ಹಲವು ಮಂದಿ ಕ್ರಿಕೆಟ್ ಬ್ಯಾಟ್‌ನಿಂದ ಯುವಕನ ತಲೆ ಹಾಗೂ ದೇಹದ ಹಲವು ಭಾಗಗಳಿಗೆ ಹೊಡೆದಿದ್ದು, ತಲೆಬುರುಡೆಗೆ ಗಂಭೀರ ಗಾಯವಾಗಿ, ಪಕ್ಕೆಲುಬು ಮತ್ತು ಕಾಲುಗಳಲ್ಲಿ ಮುರಿತ ಉಂಟಾಗಿದೆ ಎಂದು ತಿಳಿದು ಬಂದಿದೆ.

ತೀವ್ರವಾಗಿ ಗಾಯಗೊಂಡ ಶ್ರವಣ್‌ನ್ನು ಕುಕತ್ಪಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಅಮೀನ್‌ಪುರ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ, ಅಪರಾಧಕ್ಕೆ ಬಳಸಲಾದ ಕ್ರಿಕೆಟ್ ಬ್ಯಾಟ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳ ಪರಿಶೀಲನೆ ಪೂರ್ಣಗೊಳಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ದಾಳಿಯಲ್ಲಿ ಇನ್ನೂ ಯಾರಾದರೂ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.