ಖ್ಯಾತ ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಆರು ಜನರಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ನಟ ದಿಲೀಪ್ ನಿರ್ದೋಷಿ; ಸರ್ಕಾರದಿಂದ ಮೇಲ್ಮನವಿ ಸಾಧ್ಯತೆ
ಎರ್ನಾಕುಲಂ, ಡಿ.12: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಖ್ಯಾತ ನಟಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ, ಎರ್ನಾಕುಲಮ್ ಸೆಷನ್ಸ್ ಕೋರ್ಟ್ ಆರು ಪ್ರಮುಖ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದೆ.
ಎಂಟು ವರ್ಷಗಳ ವಿಚಾರಣೆಯ ನಂತರ ಹೊರಬಿದ್ದ ತೀರ್ಪಿನಲ್ಲಿ, ಎ1ರಿಂದ ಎ6ರವರೆಗಿನ ಆರೋಪಿ ಗಳಿಗೆ ತಲಾ 20 ವರ್ಷಗಳ ಕಠಿಣ ಕಾರಾಗೃಹ ಹಾಗೂ ₹50 ಸಾವಿರ ದಂಡ ವಿಧಿಸಲಾಗಿದ್ದು, ದೌರ್ಜನ್ಯ, ಸಂಚು, ಸಾಕ್ಷ್ಯ ನಾಶ ಸೇರಿದಂತೆ ಹಲವು ಆರೋಪಗಳು ಅವರ ವಿರುದ್ಧ ಸಾಬೀತಾಗಿವೆ.
2017ರ ಫೆಬ್ರವರಿಯಲ್ಲಿ ನಟಿ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ಅಪಹರಣಗೈದು ಲೈಂಗಿಕ ಕಿರುಕುಳ ನೀಡಲಾದ ಘಟನೆ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪಲ್ಸರ್ ಸುನಿ (37), ಮಾರ್ಟಿನ್ ಆಂಟೋನಿ (33), ಬಿ. ಮಣಿಕಂದನ್ (37), ವಿಜೇಶ್ ವಿ.ಪಿ. (38), ಸಲೀಮ್ ಹೆಚ್. (30) ಹಾಗೂ ಪ್ರದೀಪ್ (31) ಗೆ ಶಿಕ್ಷೆ ವಿಧಿಸಲಾಗಿದೆ.
ಮಹಿಳೆಯ ಮಾನಸಿಕ-ದೈಹಿಕ ಘನತೆಗೆ ಧಕ್ಕೆ ತರುವ ಕೃತ್ಯ, ಅಪಹರಣ, ಪಿತೂರಿ, ಅಶ್ಲೀಲ ಚಿತ್ರ ಹಂಚಿಕೆ ಸೇರಿದಂತೆ ಗಂಭೀರ ಆರೋಪಗಳು ಈ ಆರೋಪಿ ಗಳ ವಿರುದ್ಧ ದಾಖಲಾಗಿದ್ದು, ಎಲ್ಲವೂ ನ್ಯಾಯಾಲಯದಲ್ಲಿ ದೃಢಪಟ್ಟಿವೆ ಎಂದು ತೀರ್ಪು ಹೇಳಿದೆ.
ಇದೇ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ 8ನೇ ಆರೋಪಿ ಆಗಿದ್ದರು. ದೌರ್ಜನ್ಯಕ್ಕೆ ಸಂಚು ರೂಪಿಸಿ ಪಲ್ಸರ್ ಸುನಿಯನ್ನು ನಿಯೋಜಿಸಿದ್ದರು, ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದರು ಎಂಬ ಆರೋಪಗಳು ಎದುರಾಗಿದ್ದವು. ಆದರೆ, ಅವರ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ವಿಫಲವಾದ ಕಾರಣ ನ್ಯಾಯಾಲಯ ನಿರ್ದೋಷಿ ಎಂದು ಘೋಷಿಸಿದೆ.
ತೀರ್ಪಿನ ನಂತರ ದಿಲೀಪ್ ತಮ್ಮ ವಿರುದ್ಧ ಪೊಲೀಸರು ಸಂಚು ರೂಪಿಸಿದ್ದರು, ಇದರಿಂದ ತಮ್ಮ ಗೌರವಕ್ಕೆ ಹಾನಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ದಿಲೀಪ್ ಅವರಿಗೆ ಬಂದಿದ್ದ ನಿರ್ದೋಷ ತೀರ್ಪಿನ ವಿರುದ್ಧ ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಕಾನೂನು ಇಲಾಖೆ ಚರ್ಚೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
