ಚಾಲಕನೊಂದಿಗೆ ಸ್ನೇಹ, ಗೆಳೆಯನ ಮೇಲಿನ ಮೋಹ: ಅತ್ಯಾಚಾರ ಆರೋಪಕ್ಕೆ ವಿಚಿತ್ರ ತಿರುವು

ಚಾಲಕನೊಂದಿಗೆ ಸ್ನೇಹ, ಗೆಳೆಯನ ಮೇಲಿನ ಮೋಹ: ಅತ್ಯಾಚಾರ ಆರೋಪಕ್ಕೆ ವಿಚಿತ್ರ ತಿರುವು

ಬೆಂಗಳೂರು, ಡಿ. 08: ಕ್ಯಾಬ್ ಚಾಲಕ ಹಾಗೂ ಆತನ ಗೆಳೆಯರಿಂದ ಗ್ಯಾಂಗ್ ರೇಪ್‌ಗೆ ಒಳಗಾಗಿದ್ದೇನೆ ಎಂದು ದೂರು ನೀಡಿದ ಕೇರಳ ಮೂಲದ ಯುವತಿಯ ಹೇಳಿಕೆ ತನಿಖೆ ವೇಳೆ ಸಂಪೂರ್ಣ ಬದಲಾಗಿ ಪೊಲೀಸರನ್ನೇ ಗೊಂದಲಕ್ಕೊಳಪಡಿಸಿರುವ ಪ್ರಕರಣ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. 

ನಿಜಕ್ಕೂ ಆಕೆಯ ಮೇಲೆ ಅತ್ಯಾಚಾರ ನಡೆದಿದೆಯೇ ಅಥವಾ ತನ್ನ ಬಾಯ್‌ಫ್ರೆಂಡ್‌ ಬಳಿ ಸತ್ಯ ಮುಚ್ಚಿಡಲು ಕಥೆ ಹೆಣೆದಿದೆಯೇ ಎನ್ನುವ ಪ್ರಶ್ನೆ ಇದೀಗ ತನಿಖಾ ಅಧಿಕಾರಿಗಳನ್ನು ಕಾಡುತ್ತಿದೆ.

ಮಡಿವಾಳ ಪೊಲೀಸ್ ಠಾಣೆಗೆ ಬಂದು ಯುವತಿ ರವಿವಾರ ನೀಡಿದ ದೂರು ಆಧರಿಸಿ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿದ್ದರು. ಆದರೆ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಿಳಿದು, ಪ್ರಕರಣವನ್ನು ಅಲ್ಲಿ ವರ್ಗಾಯಿಸಲಾಯಿತು. ಇದೇ ವೇಳೆ ಕ್ಯಾಬ್ ಚಾಲಕ ಸರೇಶ್‌ನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆತ ನೀಡಿದ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಸರೇಶ್ ಹೇಳುವ ಪ್ರಕಾರ,

ತಾನು ಮತ್ತು ಯುವತಿ ಹಿಂದಿನಿಂದಲೇ ಪರಿಚಿತರಾಗಿದ್ದರು. ಕ್ಯಾಬ್ ಬುಕ್ಕಿಂಗ್ ವೇಳೆ ಆರಂಭವಾದ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಇಬ್ಬರ ನಡುವಿನ ವಾಟ್ಸ್ಯಾಪ್ ಚಾಟ್‌ಗಳನ್ನೂ ಆತ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.

“ನಾವು ಪರಸ್ಪರ ಒಪ್ಪಿಗೆಯ ಮೇಲೇ ದೈಹಿಕ ಸಂಪರ್ಕ ಹೊಂದಿದ್ದೇವೆ. ಗ್ಯಾಂಗ್ ರೇಪ್ ಎನ್ನುವ ದೂರು ಸುಳ್ಳು. ಆ ಸಮಯದಲ್ಲಿ ನನ್ನ ಜೊತೆಗೆ ಇನ್ನೂ ಯಾರೂ ಇರಲಿಲ್ಲ,” ಎಂದು ಸರೇಶ್ ಆರೋಪಗಳನ್ನು ತಳ್ಳಿಹಾಕಿದ್ದಾನೆ.

ಇತ್ತೀಚೆಗೆ ಇಬ್ಬರೂ ಸೇರಿ ಪಾರ್ಟಿಗೂ ಹೋಗಿದ್ದು, ಅಲ್ಲಿ ಯುವತಿಯ ಕುತ್ತಿಗೆಗೆ ಸಣ್ಣ ಗಾಯವಾಗಿತ್ತು. ಗಾಯದ ಕಾರಣವನ್ನು ಕೇಳಿದ ಯುವತಿಯ ಬಾಯ್‌ಫ್ರೆಂಡ್‌ಗೆ, ಆಕೆ ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಹೇಳಿದ್ದಾಳೆ. ಇದನ್ನು ನಂಬಿದ ಬಾಯ್‌ಫ್ರೆಂಡ್ ಯುವತಿಯನ್ನು ಮಡಿವಾಳಕ್ಕೆ ಕರೆತಂದು ದೂರು ದಾಖಲಿಸಿದ ಮಾಹಿತಿ ತನಿಖೆಯಿಂದ ಗೊತ್ತಾಗಿದೆ. 

ಆದರೆ ವಿಚಾರಣೆ ವೇಳೆ ಯುವತಿ ನೀಡಿರುವ ಹೇಳಿಕೆಗಳಲ್ಲಿ ಪರಸ್ಪರ ವಿರುದ್ಧತೆ ಕಂಡುಬಂದಿದ್ದು, ಪೊಲೀಸರು ಗೊಂದಲಕ್ಕೆ ಒಳಗಾಗಿದ್ದಾರೆ. ನಂತರ ಯುವತಿ ನೀಡಿದ ಹೇಳಿಕೆಯಲ್ಲಿ “ಚಾಲಕ ಬಲವಂತ ಮಾಡಿದ್ದ” ಎಂದು ಹೇಳಿರುವ ಹಿನ್ನಲೆ, ಅತ್ಯಾಚಾರ ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ.