ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಾತನಿಗೆ 20 ವರ್ಷ ಜೈಲು
ವಿಜಯನಗರಂ: ತನ್ನ ಮೊಮ್ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ 59 ವರ್ಷದ ಬೊಂಡಪಲ್ಲಿ ಸತ್ಯರಾವ್ ಗೆ ಪೊಕ್ಸೊ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಜೊತೆಗೆ 5 ಸಾವಿರ ರೂ. ದಂಡ ಹಾಗೂ ಬಾಲಕಿಯ ಪುನರ್ವಸತಿಗಾಗಿ 5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.
ವಿಜಯನಗರಂ ಜಿಲ್ಲೆಯ ಗಜುಲರೇಗದಲ್ಲಿ ಸಂಭವಿಸಿದ ಈ ಅಮಾನವೀಯ ಘಟನೆ ಆಗಸ್ಟ್ 18, 2025ರಂದು ಬೆಳಕಿಗೆ ಬಂದಿತ್ತು. ಮನೆಯಲ್ಲಿ ತಾತ–ಮೊಮ್ಮಗಳು ಮಾತ್ರ ಇದ್ದ ವೇಳೆಯಲ್ಲಿ ಸತ್ಯರಾವ್ ಕ್ರೌರ್ಯ ಎಸಗಿದ್ದಾನೆಂದು ತನಿಖೆಯಿಂದ ಬಹಿರಂಗವಾಗಿತ್ತು. ಘಟನೆಯ ಬಳಿಕ ಆತ ಸ್ಥಳದಿಂದ ನಾಪತ್ತೆಯಾಗಿದ್ದ.
ಮಗಳು ಅಳುವುದನ್ನು ಗಮನಿಸಿದ ಬಾಲಕಿಯ ತಾಯಿ ವಿಚಾರಿಸಿದಾಗ, ತಾತನ ಕೃತ್ಯ ಬಯಲಾಗಿದೆ. ನಂತರ ಆಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳಾ ಪೊಲೀಸ್ ಠಾಣೆಯ ಎಸ್‌ಐ ಸಿರಿಷಾ ಪ್ರಕರಣವನ್ನು ದಾಖಲಿಸಿ, ಡಿಎಸ್‌ಪಿ ಆರ್. ಗೋವಿಂದ ರಾವ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಪೂರ್ಣಗೊಳಿಸಲಾಯಿತು. ಬಳಿಕ ಆರೋಪಿ ಬಂಧನಕ್ಕೊಳಗಾಗಿ ರಿಮಾಂಡ್‌ಗೆ ಕಳುಹಿಸಲಾಗಿತ್ತು.
ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ, ಸಾಕ್ಷ್ಯ–ಪ್ರಮಾಣಗಳನ್ನು ಪರಿಗಣಿಸಿದ ನ್ಯಾಯಾಲಯವು ಸೋಮವಾರ ಶಿಕ್ಷೆಯನ್ನು ಪ್ರಕಟಿಸಿತು ಎಂದು ತಿಳಿದು ಬಂದಿದೆ.
