ಅಕ್ರಮ ಸಂಬಂಧದಿಂದ ಜನಿಸಿದ ಮಗುವಿನ ಬಾಯಿಗೆ ಕಲ್ಲು ತುರುಕಿ ಗಮ್ ಹಚ್ಚಿ, ಕಾಡಿನಲ್ಲಿ ಬಿಟ್ಟು ಬಂದ ಮಹಾತಾಯಿ! | ತಾಯಿ ಹಾಗೂ ಅಜ್ಜ ಪೊಲೀಸರ ವಶಕ್ಕೆ

ಅಕ್ರಮ ಸಂಬಂಧದಿಂದ ಜನಿಸಿದ ಮಗುವಿನ ಬಾಯಿಗೆ ಕಲ್ಲು ತುರುಕಿ ಗಮ್ ಹಚ್ಚಿ, ಕಾಡಿನಲ್ಲಿ ಬಿಟ್ಟು ಬಂದ ಮಹಾತಾಯಿ!  |  ತಾಯಿ ಹಾಗೂ ಅಜ್ಜ ಪೊಲೀಸರ ವಶಕ್ಕೆ
Photo credit: NDTV

ಭಿಲ್ವಾರ (ರಾಜಸ್ಥಾನ): ಭಿಲ್ವಾರ ಜಿಲ್ಲೆಯ ಕಾಡಿನಲ್ಲಿ ತುಟಿಗಳಿಗೆ ಗಮ್ ಹಚ್ಚಿ, ಬಾಯಲ್ಲಿ ಕಲ್ಲು ತುಂಬಿ ಎಸೆದು ಹೋಗಿದ್ದ ನವಜಾತ ಶಿಶುವಿನ ಪ್ರಕರಣ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಈ ಹಿನ್ನೆಲೆಯಲ್ಲಿ ಮಗುವಿನ ತಾಯಿ ಹಾಗೂ ಆಕೆಯ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯು ಅಕ್ರಮ ಸಂಬಂಧದಿಂದ ಗರ್ಭವತಿ ಆಗಿದ್ದು, ಸಮಾಜದ ನಿಂದನೆಗೆ ಹೆದರಿ ತಂದೆಯ ಸಹಾಯದಿಂದ ರಾಜಸ್ಥಾನದ ಬುಂಡಿಯಲ್ಲಿ ನಕಲಿ ಗುರುತು ಬಳಸಿ ಕೊಠಡಿಯನ್ನು ಬಾಡಿಗೆಗೆ ಪಡೆದು ಅಲ್ಲಿ ಹೆರಿಗೆ ಮಾಡಿಕೊಂಡಿದ್ದಾಳೆ. ಆರಂಭದಲ್ಲಿ ಮಗುವನ್ನು ಮಾರಾಟ ಮಾಡಲು ಯತ್ನಿಸಿದರೂ ಅದು ವಿಫಲವಾದ ಕಾರಣ, ಕೇವಲ 19 ದಿನದ ಶಿಶುವನ್ನು ಕಾಡಿನಲ್ಲಿ ಬಾಯಲ್ಲಿ ಕಲ್ಲು ತುಂಬಿ, ತುಟಿಗಳಿಗೆ ಗಮ್ ಹಚ್ಚಿ ಮಗುವನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದಳು ಎಂದು ತಿಳಿದು ಬಂದಿದೆ. “ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮಹಿಳೆಯನ್ನು ಬಂಧಿಸಿದ್ದೇವೆ. ಆಕೆ ಒಬ್ಬ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

 ಮಗು ಆ ಸಂಬಂಧದಿಂದ ಜನಿಸಿದ್ದು ದೃಢಪಡಿಸಲು ಡಿಎನ್ಎ ಪರೀಕ್ಷೆ ನಡೆಸಲಾಗುತ್ತಿದೆ” ಎಂದು ಭಿಲ್ವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ. ಘಟನೆಯ ದಿನ, ಮಂಡಲ್‌ಘರ್ ಪ್ರದೇಶದಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ಕುರುಬನೊಬ್ಬ ಶಿಶುವಿನ ಅಳುವ ಶಬ್ದವನ್ನು ಕೇಳಿ ಗಮನ ಹರಿಸಿದ್ದು, ತಕ್ಷಣವೇ ಗ್ರಾಮಸ್ಥರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದ. ಬಳಿಕ ಪೊಲೀಸರು ಮಗುವನ್ನು ರಕ್ಷಿಸಿ ಮಹಾತ್ಮ ಗಾಂಧಿ ಆಸ್ಪತ್ರೆಯ ನವಜಾತ ಶಿಶು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

 ಶಿಶುವಿನ ಆರೋಗ್ಯ ನಿಧಾನವಾಗಿ ಸುಧಾರಿಸುತ್ತಿದೆ. ಮಗು ಇನ್ನೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ.

 “ಮಗುವಿಗೆ ಉಸಿರಾಟದ ತೊಂದರೆ ಇರುವುದರಿಂದ ಆಮ್ಲಜನಕದ ನೆರವು ನೀಡಲಾಗುತ್ತಿದೆ. ಬಾಯಿಗೆ ಬಿಸಿ ಕಲ್ಲುಗಳು ತುರುಕಿರುವುದರಿಂದ ಸುಟ್ಟ ಗಾಯಗಳೂ ಕಂಡುಬಂದಿವೆ” ಎಂದು ಭಿಲ್ವಾರ ವೈದ್ಯಕೀಯ ಕಾಲೇಜಿನ ತಾಯಿ–ಮಕ್ಕಳ ಕೇಂದ್ರದ ಉಸ್ತುವಾರಿ ಡಾ. ಇಂದ್ರ ಸಿಂಗ್ ತಿಳಿಸಿದ್ದಾರೆ.