ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಂದನೆ, ಸ್ನೇಹ ಸಮ್ಮಿಲನ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಲು ಪ್ರೇಮಕುಮಾರ್ ಮನವಿ

ಕುಶಾಲನಗರ: ತಾವು ಓದಿದ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ, ಹಳೆಯ ವಿದ್ಯಾರ್ಥಿಗಳ ಸಮಾಗಮ,ಅಪರೂಪದ ಸ್ನೇಹ ಸಮ್ಮಿಲನ,ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲಕು ಹಾಕುತ್ತಾ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸಿದ್ದು ಅವಿಸ್ಮರಣೀಯ ಕ್ಷಣಗಳಲ್ಲೊಂದಾಗಿತ್ತು. ಇದು ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಅವರು, 2002-03- 2005-06 ನೇ ಸಾಲಿನಲ್ಲಿ ಈ ಪ್ರೌಢಶಾಲೆಯಲ್ಲಿ 20 ವರ್ಷಗಳ ಹಿಂದೆ ಕಲಿತ ವಿದ್ಯಾರ್ಥಿಗಳು ಜತೆಗೂಡಿ ಏರ್ಪಡಿಸಿದ್ದ ವಿಶಿಷ್ಠವಾಗಿ ಏರ್ಪಡಿಸಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಈ ದೃಶ್ಯವು ಕಂಡುಬಂತು.
ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಶಾಲೆಯ ಹಳೆಯ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಅಂದಿನಿಂದ ಸೇವೆ ಸಲ್ಲಿಸಿದ ಗುರುಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿದ್ಯಾರ್ಥಿ ಜೀವನದ ನೂರಾರು ನೆನಪುಗಳು ಕಣ್ಣು ಮುಂದೆ ಬರುವಂತೆ ಮಾಡಿದೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ತಮ್ಮ ಶಾಲೆಯನ್ನು ಮರೆಯದೆ, ತಮ್ಮಿಂದಾಗುವ ಸಹಕಾರವನ್ನು ಶಾಲೆಗಳ ಅಭಿವೃದ್ಧಿಗೆ ನೀಡುವುದು ಉತ್ತಮ ಬೆಳವಣಿಗೆ ಎಂದರು. ಗುರುವಿನ ಶ್ರೇಷ್ಠತೆ ವಿದ್ಯಾರ್ಥಿ ಜೀವನದಲ್ಲಿ ತಿಳಿಯುವುದಕ್ಕಿಂತ ವೃತ್ತಿ ಜೀವನದ ಪಯಣದಲ್ಲಿ ತಿಳಿಯುವುದು ಹೆಚ್ಚು. ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಶಾಲೆಯ ಹಳೆಯ ನೆನಪುಗಳು ಕಲಿಕೆಯ ಪರಿಶ್ರಮ, ಶಿಕ್ಷಣದ ಮಹತ್ವ, ಗುರುವಿನ ಶ್ರೇಷ್ಠತೆಯನ್ನು ತಿಳಿಸುತ್ತವೆ’ ಎಂದರು. ಕಲಿಸಿದ ಶಾಲೆ ಮತ್ತು ಕಲಿಸಿದ ಗುರುವಿಗೆ ನಮಿಸುವ ಹಳೇ ವಿದ್ಯಾರ್ಥಿಗಳ ಔದಾರ್ಯ ಮೆಚ್ಚುಗೆ ತಂದಿದ್ದು, ಇದು ಮಾದರಿ ಕಾರ್ಯಕ್ರಮವಾಗಿದೆ ಎಂದು ಪ್ರೇಮಕುಮಾರ್ ಪ್ರಶಂಸಿದರು.
ಶಾಲೆಯ ಹಿರಿಯ ವಿದ್ಯಾರ್ಥಿಗಳು ಒಂದು ಶಿಕ್ಷಣ ಸಂಸ್ಥೆಗಳ ಅತ್ಯುತ್ತಮ ಶೈಕ್ಷಣಿಕ ರಾಯಭಾರಿಗಳು. ಇಂತಹ ಕಾರ್ಯಕ್ರಮಗಳು "ಹಳೇ ವಿದ್ಯಾರ್ಥಿಗಳ ನಡಿಗೆ ಮರಳಿ ಸರ್ಕಾರಿ ಶಾಲೆಯೆಡೆಗೆ" ಎಂಬ ಕಲ್ಪನೆಯೊಂದಿಗೆ ಶಾಲೆಯ ಹಳೇ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ನನ್ನ ಶಾಲೆ, ನಮ್ಮೂರ ಶಾಲೆ ಎಂಬ ಧ್ಯೇಯದೊಂದಿಗೆ ಸರ್ಕಾರಿ ಶಾಲೆಗಳನ್ನು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಮುಖ್ಯ ಶಿಕ್ಷಕ ಪ್ರೇಮಕುಮಾರ್ ಹೇಳಿದರು.
ಉಪನ್ಯಾಸಕ ಫಿಲಿಪ್ ವಾಸ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸಂಪನ್ಮೂಲ ಹೆಚ್ಚಿಸಿದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯ ಕಲ್ಪಿಸಲು ಸಹಕಾರಿಯಾಗುತ್ತದೆ’ ಎಂದರು. ನಿವೃತ್ತ ಶಿಕ್ಷಕಿ ಬಿ.ಪಿ.ಅನಿತ ಮಾತನಾಡಿ, ಈ ಕಾರ್ಯಕ್ರಮವು ಗುರು- ಶಿಷ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಸಹಕಾರಿಯಾಗಿದೆ ಎಂದರು ಶಿಕ್ಷಕಿ ಮಂಜುಳ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಡೆದಾಗ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಸನ್ಮಾನಿತರಾದ ಡಿ.ರಮೇಶ್ ಮಾತನಾಡಿ, ಹಳೇ ವಿದ್ಯಾರ್ಥಿಗಳು ಗುರುಗಳು ಮತ್ತು ಶಾಲೆಯ ಮೇಲೆ ಅಭಿಮಾನವಿಟ್ಟು ಇಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಗುರುವಂದನಾ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಫಿಲಿಪ್ ವಾಸ್, ಡಿ.ರಮೇಶ್, ಮಂಜುಳ, ಸುಚಿತ್ರ,ನಿವೃತ್ತ ಶಿಕ್ಷಕಿ ಬಿ.ಪಿ.ಅನಿತಾ, ನಿವೃತ್ತ ಸಿಬ್ಬಂದಿ ಚಂದ್ರಮ್ಮ ಅವರನ್ನು ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ವಿದ್ಯಾರ್ಥಿಗಳ ಪರವಾಗಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಹಿರಿಯ ವಿದ್ಯಾರ್ಥಿಗಳಾದ ಎಸ್.ಸಕಲ ಮಹೇಶ್,ಕೆ.ಕೆ.ಚೇತನ್, ಎಂ.ಎಲ್.ಅವಿನಾಶ್, ಕೆ.ಎಚ್. ಸದ್ದಾಂ ಹುಸೇನ್, ಜಿ. ಮಧು,ಆನಂದ್, ಕೆ.ಎಂ.ಅಜರುದ್ದೀನ್, ಜಿ.ಬಿ.ಅಭಿಲಾಷ, ಎ.ಸಿ.ವಡಿವೇಲು, ಕೆ.ದಿವ್ಯ,ಮಹಾಲಕ್ಷ್ಮಿ ಮೊದಲಾವರು ತಾವು ಪ್ರೌಢಶಾಲೆಯಲ್ಲಿ ಕಳೆದ ದಿನಗಳ ಶಾಲಾ ಪರಿಸರದ ಬಗ್ಗೆ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ಶಾಲಾ ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್. ಸುಜಾತ, ಬಿ.ಡಿ. ರಮ್ಯ, ಎಸ್.ಎಂ.ಗೀತಾ ಕೆ.ಟಿ.ಸೌಮ್ಯ, ಬಿ.ಎಸ್.ಅನ್ಸಿಲಾ ರೇಖಾ, ಸಿಬ್ಬಂದಿ ಎಂ.ಉಷಾ, ರಂಗಭೂಮಿ ಕಲಾವಿದ ಭರಮಣ್ಣ ಬೆಟಗೇರಿ, ಹಿರಿಯ ವಿದ್ಯಾರ್ಥಿಗಳು ಇದ್ದರು.
ಶಾಲೆಗೆ ತಟ್ಟೆ, ಲೋಟಗಳ ಕೊಡುಗೆ:
ಸರ್ಕಾರಿ ಶಾಲೆಗಳ ಪ್ರಗತಿಗೆ ಸಮುದಾಯದ ಸಹಭಾಗಿತ್ವದಲ್ಲಿ "ನನ್ನ ಶಾಲೆ ನನ್ನ ಜವಾಬ್ದಾರಿ" ಕಾರ್ಯಕ್ರಮದಡಿ ಈ ವಿದ್ಯಾರ್ಥಿಗಳು ಶಾಲೆಯ 100 ಮಕ್ಕಳಿಗೆ ಉಚಿತವಾಗಿ ಸ್ಟೀಲ್ ತಟ್ಟೆ ಮತ್ತು ಲೋಹ ಹಾಗೂ ಅವುಗಳನ್ನು ಶೇಖರಿಸಿಡಲು ಸಂಗ್ರಹಾ ಪೆಟ್ಟಿಗೆಯನ್ನು ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. ಮಹೇಶ್ ಮಾತನಾಡಿ, ಗುರುಗಳ ಮಾರ್ಗದರ್ಶನದಲ್ಲಿ ನಾವು ವಿದ್ಯೆ, ಸಂಸ್ಕಾರವನ್ನು ಕಲಿತು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಬೆಳೆದಿದ್ದೇವೆ ಎಂದರು. ಅನಿಸಿಕೆ ವ್ಯಕ್ತಪಡಿಸಿದ ವೇಡಿವೇಲು ಮಾತನಾಡಿ, ಗುರುಗಳು ನಮ್ಮ ಪಾಲಿಗೆ ದೇವರಿದ್ದಂತೆ ಎಂದರು. --