ಬಾಲ್ಕನಿ ಮೂಲಕ ಹಾದು ಹೋದ ಹೆದ್ದಾರಿಯ ಫ್ಲೈಓವರ್! | ಅತಿಕ್ರಮಣ ಎಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಬಾಲ್ಕನಿ ಮೂಲಕ ಹಾದು ಹೋದ ಹೆದ್ದಾರಿಯ ಫ್ಲೈಓವರ್!  | ಅತಿಕ್ರಮಣ ಎಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
Photo Credit: X/@MumbaiCommunit2

ನಾಗ್ಪುರ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದೋರಾ–ಡಿಘೋರಿ ಫ್ಲೈಓವರ್ ಕುರಿತಂತೆ ಹುಟ್ಟಿಕೊಂಡಿರುವ ವಿವಾದ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವೊಂದು ವಸತಿ ಕಟ್ಟಡದ ಬಾಲ್ಕನಿಯ ಮೂಲಕ ಫ್ಲೈಓವರ್‌ನ ರೋಟರಿ ಬೀಮ್ ಭಾಗ ಹಾದುಹೋಗುತ್ತಿರುವುದನ್ನು ತೋರಿಸಿದ್ದು, ಇದರಿಂದ ಸಾರ್ವಜನಿಕರಲ್ಲಿ ನಗರ ಯೋಜನೆ, ಅತಿಕ್ರಮಣ ಮತ್ತು ಸುರಕ್ಷತೆ ಕುರಿತು ಚಿಂತನೆಗಳು ವ್ಯಕ್ತವಾಗುತ್ತಿವೆ.

ವೈರಲ್ ದೃಶ್ಯದಲ್ಲಿ, ಅಶೋಕ್ ಸ್ಕ್ವೇರ್ ಪ್ರದೇಶದಲ್ಲಿರುವ ವಸತಿ ಕಟ್ಟಡದ ಹಿಂಭಾಗದ ಬಾಲ್ಕನಿಯೊಂದನ್ನು ಫ್ಲೈಓವರ್ ಬೀಮ್ ಭಾಗ ಸೀಳುತ್ತಾ ಹಾದುಹೋಗುತ್ತಿರುವುದು ಕಂಡುಬರುತ್ತದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಯೊಬ್ಬರು, “ಸಂಬಂಧಪಟ್ಟ ಕಟ್ಟಡದ ಬಾಲ್ಕನಿ ಅತಿಕ್ರಮಿತ ಪ್ರದೇಶದೊಳಗೆ ಬರುತ್ತದೆ. ನಮ್ಮ ಫ್ಲೈಓವರ್ ನಿರ್ಮಾಣ ಬಾಲ್ಕನಿ ಒಳಗೆ ಹೋಗಿಲ್ಲ. ಆದರೆ ರೋಟರಿ ಬೀಮ್‌ನ ಫ್ಲೇಂಜ್ ಭಾಗವು ಅತಿಕ್ರಮಿತ ಬಾಲ್ಕನಿಯ ಮೂಲಕ ಹಾದುಹೋಗುತ್ತಿದೆ. ಇದನ್ನು ತೆರವುಗೊಳಿಸುವಂತೆ ನಾವು ಈಗಾಗಲೇ ನಾಗ್ಪುರ ಮಹಾನಗರ ಪಾಲಿಕೆಗೆ (NMC) ಪತ್ರ ಬರೆದಿದ್ದೇವೆ” ಎಂದು ಹೇಳಿದರು.

ಆದರೆ, ಮನೆ ಮಾಲೀಕರು ತಮ್ಮದೇ ವಾದ ಮಂಡಿಸಿದ್ದು, “ಫ್ಲೈಓವರ್ ಬೀಮ್ ಕಟ್ಟಡವನ್ನು ಮುಟ್ಟುವುದಿಲ್ಲ. ಅದು ಕಟ್ಟಡದಿಂದ 14 ರಿಂದ 15 ಅಡಿ ಎತ್ತರದಲ್ಲಿದ್ದು ಯಾವುದೇ ಸುರಕ್ಷತಾ ಅಪಾಯವಿಲ್ಲ. ಸಂಬಂಧಿಸಿದ ಬಾಲ್ಕನಿಗೂ ಇದರಿಂದ ಏನೂ ಆಗುವುದಿಲ್ಲ. ಹೀಗಾಗಿ ಜನರಿಗೆ ಅಥವಾ ಮನೆಗೆ ಯಾವುದೇ ಸಮಸ್ಯೆಯಿಲ್ಲ” ಎಂದು ಹೇಳಿದ್ದಾರೆ.

 ಇತ್ತ, ನಾಗ್ಪುರ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು, “ಕಟ್ಟಡವನ್ನು ಭೂಮಾಲೀಕರಿಂದ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಗುತ್ತಿಗೆಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.