ಹೈದರಾಬಾದ್ | ಮನೆ ಕೆಲಸಗಾರರಿಂದಲೇ ಮಹಿಳೆಯ ಭೀಕರ ಹತ್ಯೆ :ಆರೋಪಿಗಳು 20 ವರ್ಷ ವಯಸ್ಸಿನವರು!

ಹೈದರಾಬಾದ್, ಸೆ. 11: ತೆಲಂಗಾಣದ ಹೈದರಾಬಾದ್ ನ ಕುಕಟ್‌ಪಲ್ಲಿ ಪ್ರದೇಶವನ್ನು ಬೆಚ್ಚಿಬೀಳಿಸಿದ ಭೀಕರ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಗೇಟೆಡ್ ಕಮ್ಯುನಿಟಿಯ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ರೇಣು ಅಗರ್ವಾಲ್ (45) ಅವರನ್ನು ಆಕೆಯ ಮನೆ ಕೆಲಸಗಾರ ಹಾಗೂ ಅವನ ಸಹಚರರು ಹಣ ಮತ್ತು ಚಿನ್ನದಾಸೆಯಿಂದ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷ್ ಹಾಗೂ ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅವನ ಸ್ನೇಹಿತ ರೋಷನ್, ಇಬ್ಬರೂ 20 ವರ್ಷದ ಯುವಕರು. ಕೇವಲ 15,000 ರೂಪಾಯಿ ಮಾಸಿಕ ಸಂಬಳ ಪಡೆಯುತ್ತಿದ್ದ ಇವರು ಅಪಾರ ಸಂಪತ್ತನ್ನು ಕಳ್ಳತನ ಮಾಡುವ ಉದ್ದೇಶದಿಂದ ಪೂರ್ವಯೋಜಿತ ದಾಳಿ ನಡೆಸಿದ್ದಾರೆ. ವಿಧಿವಿಜ್ಞಾನ ವರದಿಯ ಪ್ರಕಾರ, ರೇಣು ಅವರ ದೇಹದಲ್ಲಿ 20 ಕ್ಕೂ ಹೆಚ್ಚು ಚಾಕು ಇರಿತ ಗಾಯಗಳು ಕಂಡುಬಂದಿದ್ದು, ಕೊಲೆಗೂ ಮೊದಲು ಕೈಕಾಲುಗಳನ್ನು ಕಟ್ಟಲಾಗಿತ್ತು ಎಂದು ತಿಳಿದು ಬಂದಿದೆ.
ಅಗರ್ವಾಲ್ ದಂಪತಿಗಳು ಸನತ್ ನಗರದಲ್ಲಿ ಉಕ್ಕಿನ ವ್ಯಾಪಾರ ನಡೆಸುತ್ತಿದ್ದು, ಮನೆಯಲ್ಲಿ ಚಿನ್ನಾಭರಣ ಮತ್ತು ನಗದು ಇರುವುದು ಆರೋಪಿಗಳಿಗೆ ತಿಳಿದಿತ್ತು. ಆದಾಗ್ಯೂ, ಮನೆಯೊಳಗಿನ ಆಭರಣಗಳು ಕಣ್ಮರೆಯಾಗಿಲ್ಲ. ಬದಲಿಗೆ, ರೇಣು ಧರಿಸಿದ್ದ ಚಿನ್ನಾಭರಣ, ಸುಮಾರು 50,000 ನಗದು ಮತ್ತು ಐದು ತೊಲೆ ಚಿನ್ನವನ್ನು ಮಾತ್ರ ಕಳ್ಳತನ ಮಾಡಲಾಗಿದೆ. ಕುಕಟ್‌ಪಲ್ಲಿ ಎಸಿಪಿ ರವಿಕಿರಣ್ ರೆಡ್ಡಿ ಅವರು, ಸ್ಥಳದಲ್ಲಿ ಪತ್ತೆಯಾದ ಬೆರಳಚ್ಚುಗಳು ಮತ್ತು ಸಿಸಿಟಿವಿ ದೃಶ್ಯಗಳು ಶಂಕಿತರ ಕೈವಾಡವನ್ನು ಖಚಿತಪಡಿಸಿರುವುದಾಗಿ ತಿಳಿಸಿದ್ದಾರೆ. ಪರಾರಿಯಾಗಿದ್ದ ಆರೋಪಿಗಳು ಬಳಿಸಿದ ಕತ್ತರಿ, ಪ್ರೆಶರ್ ಕುಕ್ಕರ್ ಮತ್ತು ರಕ್ತಸಿಕ್ತ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಒಂದನ್ನು ಆರೋಪಿಗಳ ತವರು ರಾಜ್ಯ ಜಾರ್ಖಂಡ್‌ಗೆ ಕಳುಹಿಸಲಾಗಿದೆ. ಈ ಪ್ರಕರಣದಿಂದ ಹೈದರಾಬಾದ್‌ನ ಗೇಟೆಡ್ ಕಮ್ಯುನಿಟಿಗಳ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೆ ಪ್ರಶ್ನೆಗಳು ಏಳಿವೆ.