ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪೊನ್ನಂಪೇಟೆ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪೊನ್ನಂಪೇಟೆ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ

ಪೊನ್ನಂಪೇಟೆ :-ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ, ಪೊನ್ನಂಪೇಟೆ ತಾಲೂಕು ರೆಡ್ ಕ್ರಾಸ್ ಸೊಸೈಟಿ ಪದಗ್ರಹಣ ಸಮಾರಂಭ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆಯಿತು. ಸಮಾರಂಭವನ್ನು ಜ್ಯೋತಿ ಬೆಳಗಿಸಿ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಅವರು ಉದ್ಘಾಟಿಸಿದರು.

 ಬಳಿಕ ಮಾತನಾಡಿದ ಅವರು, ರೆಡ್ ಕ್ರಾಸ್ ಸಂಸ್ಥೆ ಮಾನವೀಯ ಮೌಲ್ಯಗಳ ಸೇವೆಗಳಿಗೆ ಒಳಪಟ್ಟಿದೆ. ಜಾತಿ ಧರ್ಮಗಳಿಲ್ಲದ ರಕ್ತದ ಮಹತ್ವವನ್ನು ಅರಿತು ಹೆಚ್ಚು ರಕ್ತದಾನದ ಪ್ರಾಮುಖ್ಯತೆಗೆ ಒತ್ತು ನೀಡಿದೆ. ಈ ಉದ್ದೇಶವನ್ನು ಅರಿತು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನೂತನ ಪದಾಧಿಕಾರಿಗಳಿಂದ ನಡೆಯಲಿ ಎಂದು ಅಶಯ ವ್ಯಕ್ತಪಡಿಸಿ, ಜಾತಿ, ಧರ್ಮ,ವರ್ಣ ಭೇದಗಳಾಚೆ ನಿಂತು, ನಿಸ್ವಾರ್ಥ ಸಮಾಜ ಸೇವೆಗೆ ಮುಂದಾಗಿ ಎಂದು ಸಲಹೆ ನೀಡಿದರು.

ಪದಗ್ರಹಣ ಸ್ವೀಕರಿಸಿ ಮಾತನಾಡಿದ ಲೋಪಮುದ್ರಾ ಆಸ್ಪತ್ರೆಯ ಮುಖ್ಯಸ್ಥ ಅಮೃತ್ ನಾಣಯ್ಯ ಅವರು, ಹೆಚ್ಚುತ್ತಿರುವ ಅಪಘಾತ ಅನಾಹುತಗಳಿಂದ ರಕ್ತದ ಅವಶ್ಯಕತೆ ಹೆಚ್ಚುತ್ತಿದೆ, ರಕ್ತದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ರಕ್ತನಿಧಿ ಘಟಕವನ್ನು ಆರಂಭಿಸುವುದು ಉತ್ತಮವೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಅವರು, ತುರ್ತು ಪರಿಸ್ಥಿತಿಯಲ್ಲಿ ನೊಂದವರಿಗೆ ಸ್ಪಂದಿಸುವ ಕಾರ್ಯ ಕೊಡಗಿನಲ್ಲಿ ಕೊರೋನಾ ಸಂದರ್ಭದಲ್ಲಿ ಅತ್ಯುತ್ತಮ ಗುರಿಯಾಗಿ ಸಮಾಜವನ್ನು ತಲುಪಿದೆ. ಅಂತಹ ಸೇವೆಯನ್ನು ಮುಂದುವರಿಸುವ ಉದ್ದೇಶದೊಂದಿಗೆ ತಾಲೂಕು ಘಟಕಗಳನ್ನ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ತಾಲೂಕು ಘಟಕದ ಸಭಾಪತಿಯಾಗಿ ಬಿ.ಎನ್.ಪ್ರಕಾಶ್ ಉಪಸಭಾಪತಿಯಾಗಿ ಪಾರುವಂಗಡ ದಿಲನ್, ಕಾರ್ಯದರ್ಶಿಯಾಗಿ ಚಂದನ್ ಕಾಮತ್, ಸಹಕಾರ್ಯದರ್ಶಿ ಎಂ.ನಾಗೇಶ್, ಖಜಾಂಚಿಯಾಗಿ ರಾಜಶೇಖರ್, ನಿರ್ದೇಶಕರುಗಳಾಗಿ ಡಾ.ಅಮೃತ ನಾಣಯ್ಯ, ಎ.ಕೆ.ಗಣೇಶ್ ಕುಮಾರ್, ಪಿ.ಎಸ್. ಶರತ್‌ಕಾಂತ್, ಕೆ.ಕೆ. ಸುನಿಲ್ ಮಾದಪ್ಪ, ಜಗದೀಶ್ ಜೋಡುಬೀಟಿ , ಗಣೇಶ್ ರೈ , ಕೆ. ಬಿ. ಸಂಜೀವ್ , ಹೆಚ್ ಆರ್. ಸತೀಶ್ , ಎನ್. ಆರ್. ಅಮೃತ ರಾಜ್, ಪ್ರಮೋದ್ ಕಾಮತ್, ಕೆ.ಕೆ, ತನ್ವೀರ್, ಸೋಮಯ್ಯ , ಸೋಮಣ್ಣ , ಬಿ. ಎಂ ಚೇತನ್ , ಟಿ.ಜೆ.ಅಂತೋನಿ, ಅಬ್ದುಲ್ ಜಲೀಲ್, ಅಜಿತ್, ಸಂಜೀವ ಆಯ್ಕೆಯಾದರು. ತಾಲೂಕು ಘಟಕದ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಮೋಹನ್ ಕುಮಾರ್ , ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಉಮಾಕಾಂತ್ ,ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು, ಪೊನ್ನಂಪೇಟೆ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್. ಗೋಪಿ, ಪೊನ್ನಂಪೇಟೆ ಪಟ್ಟಣ ಪಂಚಾಯತಿ ಅಧ್ಯಕ್ಷ ಅಣ್ಣೀರ ಹರೀಶ್, ಹಾಗೂ ಪಟ್ಟಣ ಪಂಚಾಯತಿಯ ಸದಸ್ಯರು ,ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇನ್ನಿತರು ಉಪಸ್ಥಿತರಿದ್ದರು.

ವರದಿ:ಚೆಪ್ಪುಡಿರ ರೋಷನ್ ಪೊನ್ನಂಪೇಟೆ