ಹರಿಣಗಳನ್ನು ಯಶಸ್ವಿಯಾಗಿ ಬೇಟೆಯಾಡಿದ ಭಾರತಕ್ಕೆ ಸರಣಿ ಜಯ

ಹರಿಣಗಳನ್ನು ಯಶಸ್ವಿಯಾಗಿ ಬೇಟೆಯಾಡಿದ ಭಾರತಕ್ಕೆ ಸರಣಿ ಜಯ

ವಿಶಾಖಪಟ್ಟಣಂ: ಇಲ್ಲಿನ ACA–VDCA ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತವು 271 ರನ್‌ಗಳನ್ನು ಕೇವಲ ಒಂದು ವಿಕೆಟ್ ನಷ್ಟಕ್ಕೆ ಚೇಸ್ ಮಾಡಿ 9 ವಿಕೆಟ್‌ಗಳ ಅದ್ಭುತ ಗೆಲುವು ದಾಖಲಿಸಿದೆ. ಈ ಜಯದಿಂದ ಸರಣಿ 2–1ರಿಂದ ಭಾರತದ ಪಾಲಾಯಿತು.

ದಕ್ಷಿಣ ಆಫ್ರಿಕಾ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಿಂದಲೇ ರೋಹಿತ್ ಶರ್ಮಾ–ಯಶಸ್ವಿ ಜೈಸ್ವಾಲ್ ಜೋಡಿ ಗೆಲುವಿನ ವೇದಿಕೆ ನಿರ್ಮಿಸಿತು. ಜೈಸ್ವಾಲ್ ಅಜೇಯ ಶತಕ ಬಾರಿಸಿ 2 ಸಿಕ್ಸರ್‌, 12 ಬೌಂಡರಿಗಳ ನೆರವಿನಿಂದ 116 ರನ್‌ಗಳ ಸ್ಫೋಟಕ ಆಟವಾಡಿದರು. ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ 3 ಸಿಕ್ಸರ್‌, 6 ಬೌಂಡರಿಗಳೊಂದಿಗೆ ಅಜೇಯ 65 ರನ್‌ ಮಾಡಿ ಗೆಲುವಿನ ಓಟಕ್ಕೆ ಕಿಚ್ಚು ಹಚ್ಚಿದರು. ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ 73 ಎಸೆತಗಳಲ್ಲಿ 75 ರನ್‌ಗಳ ಪ್ರಭಾವಿ ಇನ್ನಿಂಗ್ಸ್‌ ಕಟ್ಟಿದರು. ಅವರ ಆಟದಲ್ಲಿ 3 ಸಿಕ್ಸರ್‌, 7 ಬೌಂಡರಿಗಳು ಸೇರಿದ್ದವು. 

ಇದಕ್ಕೂ ಮೊದಲು ಟಾಸ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 47.5 ಓವರ್‌ಗಳಲ್ಲಿ 270 ರನ್‌ಗಳಿಗೆ ಆಲೌಟ್ ಆಯಿತು.