ಕೇರಳ | 16 ವರ್ಷದ ಬಾಲಕನ ಮೇಲೆ ಎರಡು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ! 9 ಮಂದಿಯ ಬಂಧನ, 14 ಪೊಕ್ಸೊ ಪ್ರಕರಣ ದಾಖಲು

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ 16 ವರ್ಷದ ಬಾಲಕನೊಬ್ಬನ ಮೇಲೆ ಎರಡು ವರ್ಷಗಳಿಂದ ನಡೆದಿದ್ದ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಹಲವಾರು ದುಷ್ಕರ್ಮಿಗಳಿಂದ ಬಾಲಕ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 14 ಪ್ರತ್ಯೇಕ ಪ್ರಕರಣಗಳು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ) ಅಡಿಯಲ್ಲಿ ದಾಖಲೆಯಾಗಿದ್ದು, ಇದುವರೆಗೆ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕನು ಡೇಟಿಂಗ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದ. ಆ್ಯಪ್ ಮೂಲಕ ಅವನು ಅಪರಿಚಿತರ ಸಂಪರ್ಕಕ್ಕೆ ಬಂದ ಬಳಿಕ, ಪ್ರತ್ಯೇಕ ಸಂದರ್ಭಗಳಲ್ಲಿ ದುಷ್ಕರ್ಮಿಗಳು ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ಘಟನೆಗಳು ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದಿವೆ.
ಈ ಪ್ರಕರಣಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಉಳಿದ ಆರು ಪ್ರಕರಣಗಳನ್ನು ಕಣ್ಣೂರು, ಕೋಝಿಕ್ಕೋಡ್ ಮತ್ತು ಎರ್ನಾಕುಲಂ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಪ್ರತಿಯೊಂದು ಪ್ರಕರಣವೂ ಪ್ರತ್ಯೇಕ ಘಟನೆಯಾಗಿದ್ದು, ಆರೋಪಿಗಳು ಪರಸ್ಪರ ಪರಿಚಿತರಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಂಧಿತರಲ್ಲಿ ಸಹಾಯಕ ಶಿಕ್ಷಣ ಅಧಿಕಾರಿ (AEO) ಮತ್ತು ರೈಲ್ವೆ ಪೊಲೀಸ್ ಪಡೆಯ ಮಾಜಿ ಉದ್ಯೋಗಿ ಕೂಡ ಸೇರಿದ್ದಾರೆ. ಇನ್ನೊಬ್ಬ ಆರೋಪಿ ಇನ್ನೂ ಪರಾರಿಯಾಗಿದ್ದು, ಆತ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಯುವ ಘಟಕದ ಕಾರ್ಯಕರ್ತನೆಂದು ಗುರುತಿಸಲಾಗಿದೆ. ಆತನ ಪತ್ತೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದೆ.
ಬಾಲಕನ ವರ್ತನೆಯಲ್ಲಿ ಬದಲಾವಣೆ ಕಂಡು ಬಂದ ಕಾರಣ ತಾಯಿ ಅನುಮಾನಗೊಂಡು ಮಕ್ಕಳ ಸಹಾಯವಾಣಿ ಚೈಲ್ಡ್‌ಲೈನ್ಗೆ ಸಂಪರ್ಕಿಸಿದರು. ಚೈಲ್ಡ್‌ಲೈನ್ ಅಧಿಕಾರಿಗಳು ಬಾಲಕನೊಂದಿಗೆ ಸಮಾಲೋಚನೆ ನಡೆಸಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಆಕ್ರೋಶ ವ್ಯಕ್ತವಾಗಿದೆ. ಅಪ್ರಾಪ್ತ ಮಕ್ಕಳ ಸುರಕ್ಷತೆಗಾಗಿ ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಕ್ಕಳ ಹಕ್ಕುಗಳ ಹೋರಾಟಗಾರರು ಆಗ್ರಹಿಸಿದ್ದಾರೆ. ವಿಶೇಷವಾಗಿ, ಆನ್‌ಲೈನ್ ಆ್ಯಪ್‌ಗಳ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.