ಬಾಲಿವುಡ್ ಸಿನಿಮಾದಿಂದ ಪ್ರೇರಿತವಾಗಿ ಕಳ್ಳತನ ಮಾಡುತ್ತಿದ್ದ ‘ಖತರ್ನಾಕ್’ ಕಳ್ಳ ಪೊಲೀಸರ ಬಲೆಗೆ
ಬೆಳಗಾವಿ: ಬಾಲಿವುಡ್ ಸಿನಿಮಾದ ಪಾತ್ರದಿಂದ ಸ್ಫೂರ್ತಿ ಪಡೆದು ಕಳ್ಳತನ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ ಶೋಕಿ ಕಳ್ಳ ಬೆಳಗಾವಿಯ ಮಹಾಂತೇಶನಗರ ಸುರೇಶ್ ನಾಯಿಕ ಶೋಕಿ ಕಳ್ಳ ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿದ್ದಾನೆ. ಯಮಕನಮರಡಿ ಠಾಣೆ ಪೊಲೀಸರು ನಡೆಸಿದ ಚುರುಕು ಕಾರ್ಯಾಚರಣೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನ–ಬೆಳ್ಳಿ ಆಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ವಿಶ್ವನಾಥ ದುಗ್ಗಾಣಿ ಅವರ ಮನೆಯಲ್ಲಿ ಅಕ್ಟೋಬರ್ 18ರಿಂದ 22ರ ಮಧ್ಯೆ ನಡೆದಿದ್ದ ಮನೆಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಆರೋಪಿ ಸುರೇಶ್ ನಾಯಿಕನನ್ನು ಬಂಧಿಸಿದ್ದಾರೆ.
128 ತೊಲ (1280 ಗ್ರಾಂ) ಚಿನ್ನಾಭರಣ — ₹89.60 ಲಕ್ಷ, 8.5 ಕಿಲೋ ಬೆಳ್ಳಿ — ₹5.95 ಲಕ್ಷ, ₹1.25 ಲಕ್ಷ ನಗದು, ಜೊತೆಗೆ ಕಳ್ಳತನದ ಹಣದಲ್ಲಿ ಖರೀದಿಸಿದ್ದ ಥಾರ್ ವಾಹನ ಮತ್ತು ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟು ವಶವಾಗಿರುವ ಆಸ್ತಿಯ ಮೌಲ್ಯ ₹96 ಲಕ್ಷಕ್ಕೂ ಅಧಿಕ ಎಂದು ತಿಳಿದು ಬಂದಿದೆ.
"ದೀಪಾವಳಿ ವೇಳೆಯಲ್ಲಿ ಸಂಭವಿಸಿದ ಈ ದೊಡ್ಡ ಕಳ್ಳತನವನ್ನು ಭೇದಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕೊಲ್ಹಾಪುರಕ್ಕೆ ಥಾರ್‌ನಲ್ಲಿ ತೆರಳುತ್ತಿದ್ದಾಗ ಆರೋಪಿಯನ್ನು ಹಿಂಬಾಲಿಸಿ ಬಂಧಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನವಾದ ಎಲ್ಲಾ ಆಭರಣಗಳು ವಶಕ್ಕೆ ಬಂದಿವೆ," ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು.
ಸುರೇಶ್ ನಾಯಿಕನು ಯಮಕನಮರಡಿ, ಸವದತ್ತಿ, ಗೋಕಾಕ್, ಬೆಳಗಾವಿ ಗ್ರಾಮೀಣ, ಮಾಳಮಾರುತಿ, ಟಿಳಕವಾಡಿ, ಶಾಹಪುರ, ಉದ್ಯಮಬಾಗ, ಹಿರೇಬಾಗೇವಾಡಿ ಸೇರಿ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 21 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಕದ್ದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿ, ಬಾಲಿವುಡ್ ನಟನೊಬ್ಬನ ಪಾತ್ರದಿಂದ ಪ್ರೇರಣೆ ಪಡೆದಿದ್ದೇನೆ ಎಂದು ವಿಚಾರಣೆಯಲ್ಲಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
