ಕೊಡಗು ಜಿಲ್ಲಾ ಮಟ್ಟದ ಪತ್ರಕರ್ತರ ವಾಲಿಬಾಲ್ ವೈಭವ: ಇಸ್ಮಾಯಿಲ್ ಕಂಡಕರೆ ನಾಯಕತ್ವದ ಟೀಮ್ ಸ್ಮ್ಯಾಶರ್ಸ್ ಚಾಂಪಿಯನ್
ಮಡಿಕೇರಿ: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಲಾಗಿದ್ದ 2ನೇ ವರ್ಷದ ಕೊಡಗು ಜಿಲ್ಲಾಮಟ್ಟದ ಪತ್ರಕರ್ತರ ವಾಲಿಬಾಲ್ ಪಂದ್ಯಾವಳಿಯಲ್ಲಿ ಟೀಂ ಸ್ಮ್ಯಾಶರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಪಂದ್ಯಾಟದಲ್ಲಿ ಟೀಂ ಸ್ಮ್ಯಾಶರ್ಸ್, ಟೀಂ ಚೀತಾ, ಟೀಮ್ ಫ್ಲೈಯರ್ಸ್, ಟೀಂ ಜಂಪರ್ಸ್, ಟೀಂ ಹಂಟರ್ಸ್ ಮತ್ತು ಟೀಂ ಬ್ಲಾಕರ್ಸ್ ತಂಡಗಳು ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ 4 ತಂಡಗಳು ಕ್ವಾಲಿಫಯರ್ ಹಂತಕ್ಕೆ ಪ್ರವೇಶ ಪಡೆಯಿತು.
ಮೊದಲ ಕ್ಲಾಲಿಫೈಯರ್ ಪಂದ್ಯಾಟದಲ್ಲಿ ಇಸ್ಮಾಯಿಲ್ ಕಂಡಕರೆ ನಾಯಕತ್ವದ ಟೀಂ ಸ್ಮ್ಯಾಶರ್ಸ್ ತಂಡ 26-24 ಪಾಯಿಂಟ್‌ಗಳಿಂದ ಅಕ್ಷಯ್ ನಾಯಕತ್ವದ ಟೀಂ ಫ್ಲೈಯರ್ಸ್ ತಂಡವನ್ನು ಮಣಿಸಿತು.
ನಂತರ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪ್ರೇಮ್ ನಾಯಕತ್ವದ ಟೀಂ ಚೀತಾ ತಂಡ 25-19 ಪಾಯಿಂಟ್‌ಗಳಿಂದ ಆದರ್ಶ್ ನಾಯಕತ್ವದ ಟೀಂ ಜಂಪರ್ಸ್ ತಂಡವನ್ನು ಮಣಿಸಿತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪ್ರೇಮ್ ನಾಯಕತ್ವದ ಟೀಂ ಚೀತಾ ತಂಡ 25-27 ಪಾಯಿಂಟ್‌ಗಳಿಂದ ಅಕ್ಷಯ್ ನಾಯಕತ್ವದ ಟೀಂ ಫ್ಲೈಯರ್ಸ್ ತಂಡವನ್ನು ಮಣಿಸಿತು.
ಫೈನಲ್ ಪಂದ್ಯದಲ್ಲಿ ಟೀಂ ಸ್ಮ್ಯಾಶರ್ಸ್ ತಂಡ 2-1 ಸೆಟ್‌ಗಳಿಂದ ಟೀಂ ಚೀತಾ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಟೀಂ ಚೀತಾ ತಂಡ ದ್ವಿತೀಯ ಸ್ಥಾನ ಪಡೆದರೆ, ಟೀಂ ಫ್ಲೈಯರ್ಸ್ ತಂಡ ತೃತೀಯ ಸ್ಥಾನ ಪಡೆಯಿತು.
ಬೆಸ್ಟ್ ಪ್ಲೇಯರ್ ಪ್ರಶಸ್ತಿಯನ್ನು ಟೀಂ ಸ್ಮ್ಯಾಶರ್ಸ್ ತಂಡದ ಇಸ್ಮಾಯಿಲ್ ಕಂಡಕರೆ ಪಡೆದುಕೊಂಡರೆ, ಉತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಟೀಂ ಫ್ಲೈಯರ್ಸ್ ತಂಡದ ಚೈತನ್ಯ ಚಂದ್ರಮೋಹನ್ ಪಡೆದುಕೊಂಡರು. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು ನಗದನ್ನು ನೀಡಿ ಗೌರವಿಸಲಾಯಿತು.
ತೀರ್ಪುಗಾರರಾಗಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ದೈಹಿಕ ಶಿಕ್ಷಕರಾದ ರಮೇಶ್ ಮತ್ತು ವಾಲಿಬಾಲ್ ಆಟಗಾರ ಧವನ್, ಸ್ಕೋರರ್ ಆಗಿ ಬಾಚರಣಿಯಂಡ ಶಶಾಂಕ್ ಸೋಮಯ್ಯ ಕಾರ್ಯನಿರ್ವಹಿಸಿದರು.
