ʼದೃಶ್ಯಂʼ ಶೈಲಿಯಲ್ಲಿ ಪತಿಯ ಹತ್ಯೆ ಮಾಡಿ ಶೌಚಾಲಯದ ಗುಂಡಿಗೆ ಹಾಕಿದ ಪತ್ನಿ-ಪ್ರಿಯಕರಗೆ ಜೀವಾವಧಿ ಶಿಕ್ಷೆ

ʼದೃಶ್ಯಂʼ ಶೈಲಿಯಲ್ಲಿ ಪತಿಯ ಹತ್ಯೆ ಮಾಡಿ ಶೌಚಾಲಯದ ಗುಂಡಿಗೆ ಹಾಕಿದ ಪತ್ನಿ-ಪ್ರಿಯಕರಗೆ ಜೀವಾವಧಿ ಶಿಕ್ಷೆ
Photo credit: Etv bharath

ಚಾಮರಾಜನಗರ, ನ.1: ಪತಿಯನ್ನು ದೃಶ್ಯಂ ಚಿತ್ರದ ಹತ್ಯೆ ಮಾಡಿದ ಬಳಿಕ ಶವವನ್ನು ಶೌಚಾಲಯದ ಗುಂಡಿಗೆ ಹಾಕಿ ಮರೆಮಾಚಲು ಯತ್ನಿಸಿದ ಪತ್ನಿ ಹಾಗೂ ಆಕೆಯ ಪ್ರಿಯಕರರಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ ₹50,000 ದಂಡ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ.

ಹನೂರು ತಾಲೂಕಿನ ಗುಂಡಿಮಾಳ ಗ್ರಾಮದ ನಂದಿನಿ ಮತ್ತು ಆಕೆಯ ಪ್ರಿಯಕರ ದಿನಕರ್ ಶಿಕ್ಷೆಗೆ ಗುರಿಯಾದವರು. ಮೃತ ರಾಜಶೇಖರ್ ಗೆ ತಮ್ಮ ಪತ್ನಿಗೆ ನಂದಿನಿಗೆ ವಿವಾಹೇತರ ಸಂಬಂಧ ಇರುವುದು ಗೊತ್ತಾದ ಬಳಿಕ ಗ್ರಾಮದಲ್ಲಿ ಹಲವು ಬಾರಿ ಪಂಚಾಯಿತಿ ನಡೆದಿದ್ದರೂ, ಆಕೆ ಪ್ರಿಯಕರನ ಜೊತೆ ಸಂಬಂಧವನ್ನು ಮುಂದುವರೆಸಿದ್ದರು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

 2021ರ ಜೂನ್ 23ರಂದು ರಾಜಶೇಖರ್ ಮನೆಯಲ್ಲಿ ಇಲ್ಲದ ವೇಳೆ ದಿನಕರ್ ಮನೆಗೆ ಬಂದಿದ್ದ. ಕೆಲವು ಸಮಯದ ಬಳಿಕ ಮನೆಗೆ ಹಿಂತಿರುಗಿದ ರಾಜಶೇಖರ್ ಇಬ್ಬರನ್ನೂ ಒಟ್ಟಿಗೆ ಕಂಡುi ಪ್ರಶ್ನಿಸಿದಾಗ, ವಾಗ್ವಾದ ತೀವ್ರಗೊಂಡಿತ್ತು. ಈ ವೇಳೆ ನಂದಿನಿ ಹಾಗೂ ದಿನಕರ್ ಸೇರಿಕೊಂಡು ರಾಜಶೇಖರ್ ಕಣ್ಣಿಗೆ ಕಾರದಪುಡಿ ಎರಚಿ, ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಮನೆಯ ಹಿಂಭಾಗದಲ್ಲಿದ್ದ ಶೌಚಾಲಯದ ಗುಂಡಿಗೆ ತಲೆಕೆಳಗಾಗಿ ಹಾಕಿ ಮಣ್ಣಿನಿಂದ ಮುಚ್ಚಿದ್ದರು. ಇದು ದೃಶ್ಯಂ ಚಿತ್ರದ ಶೈಲಿಯ ಅಪರಾಧವಾಗಿ ಗಮನಸೆಳೆದಿತ್ತು.

ಆ ನಂತರ ರಾಜಶೇಖರ್ ಕೆಲಸಕ್ಕೆ ತೆರಳಿದ್ದಾರೆ ಎಂದು ಆರೋಪಿಗಳು ಕುಟುಂಬಕ್ಕೆ ಸುಳ್ಳು ಹೇಳಿಕೆ ನೀಡಿದ್ದರು. ಆದರೆ ಕೆಲವು ದಿನಗಳ ನಂತರ ಶೌಚಾಲಯದ ಬಳಿಯಿಂದ ದುರ್ವಾಸನೆ ಬರುತ್ತಿರುವ ಹಿನ್ನೆಲೆಯಲ್ಲಿ, ಗುಂಡಿ ತೆರೆದು ಪರಿಶೀಲಿಸಿದಾಗ ಹತ್ಯೆ ಬೆಳಕಿಗೆ ಬಂದಿತ್ತು. ಎಫ್ಎಸ್ಎಲ್ ವರದಿ ಪ್ರಕಾರ ಉಸಿರುಗಟ್ಟಿ ರಾಜಶೇಖರ್ ಮೃತಪಟ್ಟಿರುವುದು ದೃಢಪಟ್ಟಿದೆ.

ಸಂಬಂಧಿತ ಸಾಕ್ಷ್ಯಾಧಾರಗಳು ಆರೋಪಿಗಳ ವಿರುದ್ಧ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್ ಅವರು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸಿ.ಬಿ. ಗಿರೀಶ್ ವಾದ ಮಂಡಿಸಿದರು.