ಮಡಿಕೇರಿ:ಧರ್ಮಸ್ಥಳ ಭಕ್ತಾಭಿಮಾನಿ ಬಳಗ ವತಿಯಿಂದ ಪ್ರತಿಭಟನೆ

ಮಡಿಕೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆಯನ್ನು ಕೈಗೊಳಬೇಕೆಂದು ಆಗ್ರಹಿಸಿ ಧರ್ಮಸ್ಥಳ ಭಕ್ತಾಭಿಮಾನಿ ಬಳಗ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾ ನಿರತರು ಅಶಾಂತಿ ಉಂಟು ಮಾಡುತ್ತಿರುವವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆಯ ಸಂಚಾಲಕ ಧನಂಜಯ್ ಮಾತನಾಡಿ, ಕರ್ನಾಟಕದ ಪ್ರಸಿದ್ದ ಧಾರ್ಮಿಕ ಕೇಂದ್ರಗಳಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯವೂ ಸಹ ಒಂದು. ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು, ಇದಕ್ಕೆ ದಕ್ಷಿಣ ಕಾಶಿ ಎಂದೇ ನಾಮಾಂಕಿತಗೊಂಡಿರುತ್ತದೆ. ಈ ಪುಣ್ಯಕ್ಷೇತ್ರಕ್ಕೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಇತರ ರಾಜ್ಯಗಳಿಂದ ದಿನವೊಂದಕ್ಕೆ ಶ್ರೀ ಸ್ವಾಮಿಯ ದರ್ಶನ ಪಡೆಯಲು ೫೦ ಸಾವಿರದಿಂದ ರಿಂದ ೧ ಲಕ್ಷದವರೆಗೆ ಜನ ಬಂದು ಹೋಗುತ್ತಾರೆ. ಈ ರೀತಿ ಧಾರ್ಮಿಕ ನಂಬಿಕೆಯುಳ್ಳ ಪುಣ್ಯಕ್ಷೇತ್ರದ ಮೇಲೆ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಸಂತೋಷ್ ಶೆಟ್ಟಿ, ಜಯಂತ್.ಟಿ ಮತ್ತು ಅವನ ಸಹಚರರು ಸೇರಿಕೊಂಡು ಮಂಜುನಾಥಸ್ವಾಮಿ ದೇವಾಲಯ ಹಾಗೂ ಪೂಜ್ಯನೀಯ ಡಾ.ಡಿ.ವೀರೇಂದ್ರ ಹೆಗ್ಗಡೆ ಇವರಿಗೆ ಕಳಂಕ ತರುವಂತಹ ಕೀಳುಮಟ್ಟದ ಭಾಷೆಗಳಲ್ಲಿ ವಿಡಿಯೋಗಳ ತುಣುಕುಗಳನ್ನು ತಯಾರಿಸಿ ಅದನ್ನು ಸಾಮಾಜಿಕ ಜಾಲತಾಣ ಹಾಗೂ ಕೆಲವೊಂದು ಸಮೂಹ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳಿಗೆ ನಿರಂತರವಾಗಿ ಧಕ್ಕೆಯುಂಟಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿರುವುದಲ್ಲದೆ ಸಮಾಜ ಬಾಂಧವರಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕುತ್ತಿದ್ದಾರೆ. ಇದರಿಂದ ಮುಂದೆ ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿಭಂಗ ಮಾಡುವ ಸಂಭವವಿರುತ್ತದೆ ಎಂದರು. ಅನಾಮಿಕ ವ್ಯಕ್ತಿಯು ನೀಡಿದ ದೂರಿನ ಆಧಾರದಲ್ಲಿ ಕರ್ನಾಟಕದ ಘನ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. ಅದರ ಮೂಲಕ ಈ ದೂರನ್ನು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದನ್ನು ಕ್ಷೇತ್ರದ ಭಕ್ತವೃಂದದವರಾದ ನಾವೆಲ್ಲರೂ ಗೌರವದಿಂದ ಸ್ವಾಗತಿಸುತ್ತಿದ್ದೇವೆ. ಸದರಿ ನಡೆಯುತ್ತಿರುವ ತನಿಖೆಯು ಅರ್ಥಪೂರ್ಣವಾಗಿ ಕೊನೆಗೊಳ್ಳಬೇಕಾಗಿದೆ. ಅನಾಮಿಕ ದೂರುದಾರನನ್ನು ಬಳಸಿಕೊಂಡು ಸುಳ್ಳು ಆರೋಪ ಮಾಡಲು ಯಾರು ಪ್ರಚೋದನೆ ಮಾಡುತ್ತಿದಾರೆ ಅವರನ್ನು ತನಿಖೆಗೊಳಪಡಿಸಬೇಕು.
ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹತ್ತಿರ ಮೊಬೈಲ್‌ನಲ್ಲಿ ಸಾಕ್ಷಾಧಾರಗಳು ಇವೆ ಎಂದು ಘಂಟಾಘೋಷವಾಗಿ ಸಾರುತ್ತಿರುವ ವ್ಯಕ್ತಿಗಳ ಮೊಬೈಲ್‌ಗಳನ್ನು, ಮನೆ ಹಾಗೂ ಕಛೇರಿಗಳನ್ನು ತನಿಖೆ ಮಾಡಬೇಕು ಎಂದ ಆಗ್ರಹಿಸಿದರು. ಸತ್ಯಾಂಶವನ್ನು ಬಯಲಿಗೆ ಎಳೆಯಲು ಈಗಿರುವ ತನಿಖಾ ತಂಡದಿಂದ(ಎಸ್‌ಐಟಿ) ಅಥವಾ ಇನ್ನೊಂದು ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಬೇಕು. ಅಪಪ್ರಚಾರ ಮಾಡುತ್ತಾ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿಬಿಡುತ್ತಿರುವುದರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ೩೦೦ಕ್ಕೂ ಅಧಿಕ ಭಕ್ತಾಭಿಮಾನಿಗಳು ಪಾಲ್ಗೊಂಡಿದ್ದರು.