ಮಡಿಕೇರಿ ನಗರಸಭೆ ವಿಶೇಷ ಸಾಮಾನ್ಯ ಸಭೆ:ರಾಜಾಸೀಟ್ ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ ವಿರೋಧಿಸಲು ತೀರ್ಮಾನ

ಮಡಿಕೇರಿ: ರಾಜಾಸೀಟ್ ಉದ್ಯಾನದಲ್ಲಿ ಗ್ಲಾಸ್ ಸ್ಕೈವಾಕ್ ನಿರ್ಮಾಣವಾಗಲಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ ನಗರಸಭೆಯ ಗಮನಕ್ಕೆ ತರದ ಹಿನ್ನೆಲೆ ಕಾಮಗಾರಿಯನ್ನು ವಿರೋಧಿಸಲು ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಆರಂಭದಲ್ಲೇ ನಗರಸಭಾ ಸದಸ್ಯರು ಮತ್ತು ನಾಮನಿರ್ದೇಶಿತ ಸದಸ್ಯರು ಸಭೆಯನ್ನು ವಿರೋಧಿಸಿ ಪೌರಾಯುಕ್ತರು, ಅಧ್ಯಕ್ಷರು, ಉಪಾಧ್ಯಕ್ಷರ ಮುಂಭಾಗ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆಯಲ್ಲಿ ಗ್ಲಾಸ್ ಸ್ಕೈವಾಕ್ ಕುರಿತು ಅಭಿಪ್ರಾಯ ಕೇಳಿದ ಸಂದರ್ಭದಲ್ಲಿ ರಾಜಸೀಟ್ ಉದ್ಯಾನ ಪ್ರವಾಸಿಗರು ಆಗಮಿಸುವ ಸಂದರ್ಭ ಪಾರ್ಕಿಂಗ್ ಸೌಲಭ್ಯವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಗ್ಲಾಸ್ ಸ್ಕೈವಾಕ್ ನಿರ್ಮಾಣವಾದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಇತ್ತೀಚೆಗೆ ರಾಜಾಸೀಟ್‌ನ ಕೆಳಭಾಗ ಇರುವ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಬಿರುಕುಬಿಟ್ಟು ಆತಂಕಕ್ಕೀಡು ಮಾಡಿದೆ. ಇಂತಹ ಘಟನೆಗಳು ನಡೆಯುವ ಸಂದರ್ಭ ರಾಜಾಸೀಟ್‌ನಲ್ಲಿ ಗ್ಲಾಸ್ ಸ್ಕೈವಾಕ್ ನಿರ್ಮಾಣ ಮಾಡಿ ಅದರಿಂದಾಗುವ ಅನಾಹುತಗಳಿಗೆ ನಗರಸಭೆಯೇ ನೇರ ಹೊಣೆಯಾಗುತ್ತದೆ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ಲಾಸ್ ಸ್ಕೈವಾಕ್ ನಿರ್ಮಾಣ ಕುರಿತು ಸ್ಥಳೀಯ ಆಡಳಿತದ ಗಮನಕ್ಕೂ ತರದ ಹಿನ್ನೆಲೆ ಕಾಮಗಾರಿಯ ಆರಂಭದ ಹಂತದಲ್ಲೇ ವಿರೋಧಿಸಲಾಗುತ್ತಿದೆ ಎಂದು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ನಗರಸಭೆ ಪೌರಾಯುಕ್ತ ರಮೇಶ್ ಸೇರಿದಂತೆ ನಗರಸಭೆ ಸದಸ್ಯರು, ಮೂಡ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.