ಮಡಿಕೇರಿ: ಸ್ತನ್ಯಪಾನ ಸಪ್ತಾಹ, ಉಪಶಮನ ಆರೈಕೆ ಕೇಂದ್ರದ ಬಗ್ಗೆ ಅರಿವು ಕಾರ್ಯಕ್ರಮ

ಮಡಿಕೇರಿ: ಸ್ತನ್ಯಪಾನ ಸಪ್ತಾಹ, ಉಪಶಮನ ಆರೈಕೆ ಕೇಂದ್ರದ ಬಗ್ಗೆ ಅರಿವು ಕಾರ್ಯಕ್ರಮ

ಮಡಿಕೇರಿ:ಬಾಣೆಮೊಟ್ಟೆ ಮತ್ತು ರಾಘವೇಂದ್ರ ದೇವಸ್ಥಾನ ಅಂಗನವಾಡಿ ಕೇಂದ್ರಗಳಲ್ಲಿ ಸ್ತನ್ಯಪಾನ ಮತ್ತು ಉಪಶಮನ ಆರೈಕೆ ಬಗ್ಗೆ ಅರಿವು ಕಾರ್ಯಕ್ರಮ ನೆರವೇರಿತು. ನಗರಸಭೆ ಕೌನ್ಸಿಲರ್ ಸತೀಶ್ ರವರು ಮಾತನಾಡಿ ಎರಡು ಕಾರ್ಯಕ್ರಮವು ಉತ್ತಮವಾದ ಸಂದೇಶವನ್ನು ಒಳಗೊಂಡಿದ್ದು ಜನರು ಇತರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.

ಮೇಲ್ವಿಚಾರಕರು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇಪಾಡಂಡ ಸವಿತಾ ಕೀರ್ತನ್ ರವರು ಸ್ತನ್ಯಪಾನ ಸಪ್ತಾಹದ ಮಹತ್ವದ ಬಗ್ಗೆ, ಗರ್ಭಿಣಿ ಬಾಣಂತಿ ಮಗುವಿನ ಆರೈಕೆ ಪೌಷ್ಟಿಕ ಆಹಾರದ ಬಗ್ಗೆ ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.‘ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್’ ನ ಶ್ರೀಮತಿ ಶೋಭಾ ಅವರು ಮಾತನಾಡಿ, ಈ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, 1984 ರಿಂದ ಸರ್ಕಾರ, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ರಾಜ್ಯಾದ್ಯಾಂತ ಆರೋಗ್ಯ, ಶಿಕ್ಷಣ, ಸಾಮಾಜಿಕ ಆರ್ಥಿಕ ಸಬಲೀಕರಣ ಕಾರ್ಯಕ್ರಮ ಮತ್ತು ತರಬೇತಿ ಹಾಗೂ ಸಂಶೋಧನೆ ಎಂಬ ನಾಲ್ಕು ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ. 2018 ರಿಂದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಕೊಡಗು ಜಿಲ್ಲೆಯಾದ್ಯಂತ ಆರೋಗ್ಯ, ಶಿಕ್ಷಣ, ತರಬೇತಿ ಮತ್ತು ಸಾಮಾಜಿಕ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಸರ್ಕಾರ ಮತ್ತು ಸಮುದಾಯದ ಸಹಕಾರದಿಂದ, ‘ಉಪಶಮನ ಆರೈಕೆ’ (Palliative Care) ಕಾರ್ಯಕ್ರಮವನ್ನು ಈಗಾಗಲೇ ಮೈಸೂರು, ಸರಗೂರು, ಹಾಸನ, ಬೆಂಗಳೂರು ಮತ್ತು ಧಾರವಾಡದಲ್ಲಿ ಅನುಷ್ಠಾನಗೊಳಿಸಿದ್ದು, ಈ ಕಾರ್ಯಕ್ರಮದ ವತಿಯಿಂದ ಕ್ಯಾನ್ಸರ್ ಮತ್ತು ಇನ್ನಿತರೇ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಮನೆಗೆ ಪ್ರತಿ ದಿನ ವೈದ್ಯರು, ನರ್ಸ್ಸ್, ಆಪ್ತಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರ ತಂಡ ಭೇಟಿ ನೀಡುತ್ತಿದ್ದು; ರೋಗಿಗಳಿಗೆ ವೈದ್ಯಕೀಯ ಸೇವೆ, ಆಪ್ತಸಮಾಲೋಚನೆ, ಭಾವನಾತ್ಮಕ ಬೆಂಬಲ ಸೇವೆ, ಸಾಮಾಜಿಕ ಸವಲತ್ತು ಸೇವೆಗಳು, ಸಾಧನ ಸಲಕರಣೆ ವಿತರಣೆ ಮತ್ತು ಶಿಫಾರಸ್ಸು ಹಾಗೂ ಸಂಪರ್ಕ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಈ ‘ಉಪಶಮನ ಆರೈಕೆ’ (Palliative Care) ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಸರ್ಕಾರ ಮತ್ತು ಸಮುದಾಯದ ಸಹಕಾರದಿಂದ ಮಡಿಕೇರಿ ನಗರದಲ್ಲಿ ಮೇ 2024 ಮಾಹೆಯಿಂದ ಪ್ರಾರಂಭಿಸಲಾಗಿದ್ದು, ಇದುವರೆವಿಗೂ 106 ಫಲಾನುಭವಿಗಳು ನೋಂದಣಿಯಾಗಿರುತ್ತಾರೆ. ಇದು ಗೃಹ ಆಧಾರಿತ ಕಾರ್ಯಕ್ರಮವಾಗಿದ್ದು; ವೈದ್ಯರು, ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತರವರುಗಳು ಪ್ರತೀ ದಿವಸ ಮನೆ ಭೇಟಿ ಮಾಡುವುದರ ಮೂಲಕ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ಅಮುದ, ಗೀತಾ ಸಹಾಯಕಿಯರಾದ ರೋಹಿಣಿ,ಅನಿತಾ ಆಶಾ ಕಾರ್ಯಕರ್ತೆಯಾದ ಸಾಯಿದಾಬಾನು,ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಪಲ್ಲವಿ ಹಾಜರಿದ್ದರು.