ಮದುವೆ ಆರತಕ್ಷತೆಯಲ್ಲಿ ಎಂಜಲು ಉಗುಳಿ ರೊಟ್ಟಿ ತಯಾರಿಸಿದ ವ್ಯಕ್ತಿಯ ಬಂಧನ
ನವದೆಹಲಿ, ಡಿ. 6: ಉತ್ತರ ಪ್ರದೇಶದ ಮೌ ಸಮೀಪದ ಹಳ್ಳಿಯೊಂದರಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ ತಂದೂರಿ ರೊಟ್ಟಿ ತಯಾರಿಸುವಾಗ ಹಿಟ್ಟಿನ ಮೇಲೆ ಎಂಜಲು ಉಗುಳಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಕೃತ್ಯ ಕ್ಯಾಮೆರಾದಲ್ಲಿ ದಾಖಲಾಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆ ಶುಕ್ರವಾರ ಗ್ರಾಮದ ಮಾಜಿ ಮುಖ್ಯಸ್ಥ ಅವಧೇಶ್ ಮೌರ್ಯ ಅವರ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಡೆದಿದೆ. ರೊಟ್ಟಿ ತಯಾರಿಸುತ್ತಿದ್ದ ಆರೋಪಿಯಾದ ಅಹ್ಮದ್, ಹಿಟ್ಟಿನ ಮೇಲೆ ಎಂಜಲು ಉಗುಳುತ್ತಿರುವ ವಿಡಿಯೋ ಹರಿದಾಡುತ್ತಿದ್ದಂತೆ ನಿವಾಸಿಗಳಲ್ಲಿ ಆಕ್ರೋಶ ಎದ್ದಿದೆ.
“ದೂರು ಸ್ವೀಕರಿಸಿದ ಬಳಿಕ ವೀಡಿಯೊ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದೇವೆ. ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ,” ಎಂದು ಹೆಚ್ಚುವರಿ ಎಸ್ಪಿ ಅನುಪ್ ಕುಮಾರ್ ತಿಳಿಸಿದ್ದಾರೆ.
ಈ ವೀಡಿಯೊವನ್ನು ಸ್ಥಳೀಯ ನಿವಾಸಿ ಅಜಯ್ ರೈ ಪೊಲೀಸರಿಗೆ ಒದಗಿಸಿದ್ದು, ಅವರು ಲಿಖಿತ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದಾರೆ.
