ಅಳುತ್ತಿದ್ದ ಕಂದನಿಗೆ ಹಾಲುಣಿಸಿದ ತಾಯಿ; ಎದ್ದು ನೋಡುವಾಗ ಮಗು ಮೃತ್ಯು!
ಚೆನ್ನೈ, ಡಿ. 9: ತಮಿಳುನಾಡಿನ ತಿರುಪುರ ಜಿಲ್ಲೆಯಲ್ಲಿ 1 ತಿಂಗಳ ಶಿಶುವೊಂದು ಎದೆಹಾಲು ಕುಡಿದ ಬಳಿಕ ನಿದ್ರೆಯಲ್ಲೇ ಸಾವನ್ನಪ್ಪಿದ ದುರಂತ ನಡೆದಿದೆ. ಬೆಳಗಿನ ಜಾವ ಅಳುತ್ತಿದ್ದ ಮಗುವಿಗೆ ತಾಯಿ ಹಾಲುಣಿಸಿ ಮಲಗಿದ್ದರೂ, ಬೆಳಿಗ್ಗೆ ಎದ್ದಾಗ ಮಗು ಪ್ರಾಣ ತಪ್ಪಿರುವುದು ಪತ್ತೆಯಾಗಿದೆ.
ಪಲ್ಲಡಂ ಪ್ರದೇಶದ ಅನಿಲ್ (21) ಹಾಗೂ ಪತ್ನಿ ಪೂಜಾ (20) ದಂಪತಿಗೆ ಶ್ರೀನಿ ಎಂಬ 1 ತಿಂಗಳ ಗಂಡು ಮಗು. ಕೆಲ ದಿನಗಳಿಂದ ತಾಯಿ ಪೂಜಾಗೆ ತಲೆನೋವು ಮತ್ತು ಕಾಲು ನೋವು ಕಾಣಿಸಿಕೊಂಡಿದ್ದರಿಂದ ಅವರು ಪಲ್ಲಡಂ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಹೆಚ್ಚಿನ ಚಿಕಿತ್ಸೆಗೆ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಯನ್ನು ವೈದ್ಯರು ಸೂಚಿಸಿದ್ದರು. ನವೆಂಬರ್ 28ರಿಂದ ಪೂಜಾ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಡಿಸೆಂಬರ್ 7ರಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ಶಿಶು ಅಳಲು ಆರಂಭಿಸಿತು. ತಾಯಿ ಪೂಜಾ ನಿದ್ರೆಯಿಂದ ಎದ್ದು ಮಗುವಿಗೆ ಹಾಲುಣಿಸಿ ಮತ್ತೆ ಮಲಗಿದರು. ಬೆಳಿಗ್ಗೆ ಎದ್ದು ನೋಡಿದಾಗ ಮಗು ಅಲುಗಾಡದೇ ಮಲಗಿರುವುದನ್ನು ಕಂಡ ಅವರು ಗಂಡನಿಗೆ ಮಾಹಿತಿ ನೀಡಿದರು. ವೈದ್ಯರು ಪರಿಶೀಲಿಸಿದಾಗ ಮಗು ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿತು.
ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಶಿಶುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಾಲುಣಿಸಿದ ನಂತರ ನಿದ್ರೆಯಲ್ಲೇ ಉಸಿರುಗಟ್ಟಿ ಮಗು ಮೃತಪಟ್ಟಿರಬಹುದೆಂಬ ಪ್ರಾಥಮಿಕ ಅಭಿಪ್ರಾಯ ವೈದ್ಯರಿಂದ ವ್ಯಕ್ತವಾಗಿದೆ. ಅಥವಾ ಹಾಲು ಕುಡಿಯುವ ವೇಳೆಯೇ ಉಸಿರಾಟಕ್ಕೆ ತೊಂದರೆ ಉಂಟಾಗಿ ದುರಂತ ಸಂಭವಿಸಿರಬಹುದೆನ್ನಲಾಗಿದೆ. ನಿಖರ ಕಾರಣ ಶವಪರೀಕ್ಷೆಯ ನಂತರವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಗ್ಯ ತಜ್ಞರು, ಆರು ತಿಂಗಳೊಳಗಿನ ಶಿಶುಗಳಿಗೆ ಹಾಲುಣಿಸುವಾಗ ತಾಯಂದಿರಿಂದ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ ಎಂದು ಪುನರುಚ್ಚರಿಸಿದ್ದಾರೆ. ಹಾಲು ಕುಡಿಸಿದ ನಂತರ ಮಗು ತೇಗು ಹೋಗುವಂತೆ ನೋಡಿಕೊಳ್ಳುವುದು, ಉಸಿರಾಟಕ್ಕೆ ತೊಂದರೆ ಉಂಟಾಗದಂತೆ ನಿರಂತರ ಗಮನಿಸುವುದು ಅತ್ಯಗತ್ಯ ಎನ್ನುತ್ತಾರೆ.
