ಇ-ರಿಕ್ಷಾ ಚಾಲಕನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು; ಶಾಲಾ ಬಾಲಕ ಬಂಧನ | ಯಾವುದೇ ಸುಳಿವು ಇಲ್ಲದೇ, ಸವಾಲಾಗಿದ್ದ ಪ್ರಕರಣ

ಗೊಂಡಾ: ಯಾವುದೇ ಸುಳಿವುಗಳಿಲ್ಲದೆ ಸವಾಲಾಗಿದ್ದ ಉತ್ತರ ಪ್ರದೇಶದ ಗೊಂಡಾದ ಇ- ರಿಕ್ಷಾ ಚಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿ 11ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸೆಪ್ಟೆಂಬರ್ 22ರಂದು ಝಾನ್ಸಿಯ ಬಾಬಿನಾದ ಹಾಸ್ಟೆಲ್ ನಲ್ಲಿ ಬಂಧಿಸಲಾಗಿದೆ.
ಆಗಸ್ಟ್ 27ರ ಬೆಳಗಿನ ಜಾವ ನವಾಬ್‌ಗಂಜ್ ಪ್ರದೇಶದ ಕಾಡಿನಲ್ಲಿ 50 ವರ್ಷದ ಇ-ರಿಕ್ಷಾ ಚಾಲಕ ಸಂಗಮ್ ಲಾಲ್ ಅವರ ಶವ ಪತ್ತೆಯಾಗಿತ್ತು. ಕತ್ತು ಹಿಸುಕಿರುವ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ಹತ್ತಿರ ಅವರ ಕೈಚೀಲ ಮತ್ತು ಅವರಿಗೆ ಸೇರಿದ ವಸ್ತುಗಳು ಕಂಡುಬಂದಿದ್ದರೂ, ದರೋಡೆ, ದ್ವೇಷ ಅಥವಾ ಹಣಕಾಸು ಸಂಬಂಧಿತ ಯಾವುದೇ ಸುಳಿವು ದೊರೆತಿರಲಿಲ್ಲ. ಇದರಿಂದ ಪ್ರಕರಣ ಸಂಪೂರ್ಣ ಗೂಢಹತ್ಯೆಯಾಗಿ ಪರಿಣಮಿಸಿತ್ತು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆಗಸ್ಟ್ 26ರಂದು ಸಂಗಮ್ ಲಾಲ್ ನೆರೆಯ ಅಯೋಧ್ಯೆಗೆ ಕೆಲಸಕ್ಕಾಗಿ ತೆರಳಿದ ಬಳಿಕ ನಾಪತ್ತೆಯಾಗಿದ್ದರು ಎಂದು ತಿಳಿದುಬಂತು. ನಂತರ ನಡೆದ ವಿಚಾರಣೆಯಲ್ಲಿ, ಆರೋಪಿ ಬಾಲಕ ಅಯೋಧ್ಯ ದರ್ಶನಕ್ಕಾಗಿ ರೈಲಿನಲ್ಲಿ ಬಂದಿದ್ದು, ಸಂಗಮ್ ಲಾಲ್ ಅವರ ಇ-ರಿಕ್ಷಾದಲ್ಲಿ ಪ್ರಯಾಣಿಸಿದ್ದನು ಎಂಬುದು ಬೆಳಕಿಗೆ ಬಂದಿದೆ. ಬಾಲಕನಿಗೆ ಸಾಕಷ್ಟು ಸಮಯವಿದೆ ಎಂದು ಭಾವಿಸಿದ ರಿಕ್ಷಾ ಚಾಲಕನು ಆತನನ್ನು ಏಕಾಂತದ ಸ್ಥಳಗಳಿಗೆ ಕರೆದೊಯ್ಯುವ ಸಲುವಾಗಿ ಗಂಟೆಗಟ್ಟಲೆ ಸುತ್ತಾಡಿಸಿದ್ದನು. ಬಳಿಕ ಚಾಲಕ ಸಂಗಮ್ ಲಾಲ್ “ಅಸ್ವಾಭಾವಿಕ ಕೃತ್ಯಗಳಿಗೆ” ಒತ್ತಡ ಹೇರಿದ ಹಿನ್ನೆಲೆಯಲ್ಲಿ ಘರ್ಷಣೆ ಉಂಟಾಗಿ, ಬಾಲಕ ಸ್ಕಾರ್ಫ್ ಬಳಸಿ ಚಾಲಕನ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ಭೇದಿಸಲು ನವಾಬ್‌ಗಂಜ್ ಪೊಲೀಸ್, ವಿಶೇಷ ಕಾರ್ಯಾಚರಣೆ ದಳ (ಎಸ್‌ಒಜಿ), ಕಣ್ಗಾವಲು ಘಟಕ ಸೇರಿ ಮೂರು ತಂಡಗಳನ್ನು ರಚಿಸಲಾಗಿತ್ತು. ಶ್ವಾನ ದಳ, ವಿಧಿವಿಜ್ಞಾನ ತಜ್ಞರು ಹಾಗೂ ಅಯೋಧ್ಯ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆಯ ಸಹಾಯದಿಂದ ನಿರ್ಣಾಯಕ ಸುಳಿವುಗಳನ್ನು ಪತ್ತೆಹಚ್ಚಲಾಯಿತು.
“ಇದು ಆಸ್ತಿ, ಹಣಕಾಸು ಅಥವಾ ವೈಯಕ್ತಿಕ ದ್ವೇಷಕ್ಕೆ ಸಂಬಂಧಿಸಿದ ಪ್ರಕರಣವಾಗಿರಲಿಲ್ಲ. ಸಂಪೂರ್ಣ ಕುರುಡರ ಕೊಲೆಯಂತಿದ್ದ ಈ ಪ್ರಕರಣವನ್ನು ತಾಂತ್ರಿಕ ಪರಿಶೀಲನೆ ಹಾಗೂ ನಿಖರ ತನಿಖೆಯ ಮೂಲಕವೇ ಭೇದಿಸಲು ಸಾಧ್ಯವಾಯಿತು", ಎಂದು ಗೊಂಡಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಹೇಳಿದ್ದಾರೆ.
ಬಂಧಿತ ಬಾಲಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಬಾಲಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.