ಪೊನ್ನಂಪೇಟೆ:ಸೊಸೈಟಿ ಅಕ್ಕಿ ಅಕ್ರಮ ಸಾಗಾಟ, ವಾಹನ, ಚಾಲಕ ಸಹಿತ ಅಕ್ಕಿ ವಶಕ್ಕೆ:

ಪೊನ್ನಂಪೇಟೆ:ಸೊಸೈಟಿ ಅಕ್ಕಿ ಅಕ್ರಮ ಸಾಗಾಟ, ವಾಹನ, ಚಾಲಕ ಸಹಿತ ಅಕ್ಕಿ ವಶಕ್ಕೆ:

ಪೊನ್ನಂಪೇಟೆ:ಸೊಸೈಟಿ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರ ಮಾಹಿತಿ ಆಧರಿಸಿ ಆಹಾರ ಇಲಾಖಾಧಿಕಾರಿಗಳು ದಾಳಿ ನಡೆಸಿ ಅಕ್ಕಿಯನ್ನು ವಶಕ್ಕೆ ಪಡೆದ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 1 ವಾಹನ, ಚಾಲಕ ಸಹಿತ 7 ಕ್ವಿಂಟಾಲ್ 79 ಕೆ.ಜಿ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.

 ಗೋಣಿಕೊಪ್ಪಲಿನ ಮುಸ್ತಫ ಹಾಗೂ ಅರ್ವತೋಕ್ಲು ಗ್ರಾಮದ ಮನೋಜ್ ಎಂಬುವರಿಂದ ಪಡಿತರ ಅಕ್ಕಿಯನ್ನು ಸಂಗ್ರಹಿಸಿದ್ದು, ಅಲ್ಲದೇ ಆರೋಪಿ ವಿಠಲ ಗೋಣಿಕೊಪ್ಪಲಿನಲ್ಲಿ ಗುಜರಿ ಅಂಗಡಿ ಹೊಂದಿದ್ದು, ಅಂಗಡಿಗೆ ಬರುವ ಕಾರ್ಮಿಕರಿಂದ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ವಾಹನವೊಂದರಲ್ಲಿ ಹುಣಸೂರಿನ ಕಲ್ಕುಣಿಕೆ ಎಂಬಲ್ಲಿಗೆ ಸಾಗಿಸುತ್ತಿರುವ ಕುರಿತು ಆಹಾರ ಇಲಾಖಾಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಆಹಾರ ಇಲಾಖಾಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಗೋಣಿಕೊಪ್ಪ-ಮೈಸೂರು ರಸ್ತೆಯ ಚೆನ್ನಂಗೊಲ್ಲಿಯಲ್ಲಿ ಸೊಸೈಟಿ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿದ್ದಾರೆ.

ವಾಹನವನ್ನು ಪರಿಶೀಲನೆ ನಡೆಸಿದ ಸಂದರ್ಭ ಮೇಲ್ನೋಟಕ್ಕೆ ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ಟೇಬಲ್, ಮಂಚ ಹಾಗೂ ಬಾಳೆಗೊನೆಗಳನ್ನು ಇಟ್ಟು ಅದರ ಕೆಳಭಾಗ ಅಕ್ಕಿ ಚೀಲಗಳನ್ನು ಜೋಡಿಸಿರುವುದು ಕಂಡು ಬಂದಿದೆ. ವಾಹನ ಚಾಲಕನನ್ನು ವಿಚಾರಣೆ ನಡೆಸಿದ ಸಂದರ್ಭ ಅಕ್ಕಿ ಸಾಗಾಟಕ್ಕೆ ಯಾವುದೇ ಪರವಾನಗಿ ಮತ್ತು ದಾಖಲಾತಿ ಇಲ್ಲದಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಿ ಸಾಗಾಟಕ್ಕೆ ಬಳಸಿದ್ದ ಝೈಲೋ ವಾಹನ ಮತ್ತು 31 ಅಕ್ಕಿ ಚೀಲಗಳನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಯಿತು. ವಾಹನ ಚಾಲಕ ಹುಣಸೂರಿನ ಕಲ್ಕುಣಿಕೆ ನಿವಾಸಿ ವಿಠಲ ಎಂಬಾತನನ್ನು ಗೋಣಿಕೊಪ್ಪ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆಯ ಆಹಾರ ನಿರೀಕ್ಷಕ ಪಿ.ಎಂ.ನಿಶಾನ್, ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಸಹಾಯಕ ಸುನೀಲ್ ಮತ್ತಿತ್ತರರು ಪಾಲ್ಗೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ.