ಪೊನ್ನಂಪೇಟೆ: ಕಿರುಗೂರು ಗ್ರಾಮದ ಶ್ರೀ ವಿನಾಯಕ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಗಳ ಅದ್ಧೂರಿಯ ವಿಸರ್ಜನೋತ್ಸವ

ಪೊನ್ನಂಪೇಟೆ:ತಾಲೂಕಿನ ಕಿರುಗೂರು ಗ್ರಾಮದ ಶ್ರೀ ವಿನಾಯಕ ಬಳಗದ ವತಿಯಿಂದ ಕಿರುಗೂರು ಮಹಿಳಾ ಸಮಾಜದ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮೂರನೇ ವರ್ಷದ ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಬಾರಿ ಮಳೆಯ ನಡುವೆ ವಿಜೃಂಭಣೆಯಿoದ ನಡೆಯಿತು. ಶ್ರೀ ಮಹದೇಶ್ವರ ದೇವಸ್ಥಾನದ ಆರ್ಚಕರಾದ ಸುದರ್ಶನ್ ಭಟ್ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.
ಶುಕ್ರವಾರ ಸಂಜೆ ಕೊದೇಂಗಡ ಅಖಿಲ್ ಅವರ ಮುಂದಾಳತ್ವದಲ್ಲಿ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಶ್ರೀ ಗೌರಿ, ಗಣೇಶ ಮೂರ್ತಿಗಳನ್ನು ಕುಳ್ಳಿರಿಸಿ ಗ್ರಾಮದಲ್ಲಿ ಅದ್ದೂರಿಯಾಗಿ ಡಿಜೆ ಯೊಂದಿಗೆ ಹಾಗೂ ಸುಡುಮದ್ದು ಪ್ರದರ್ಶನದೊಂದಿಗೆ ಮೆರವಣಿಗೆ ನಡೆಯಿತು. ಕಿರುಗೂರು ಮುಖ್ಯ ರಸ್ತೆಯಲ್ಲಿ ಶ್ರೀ ಮಹದೇಶ್ವರ ದೇವಸ್ಥಾನದ ಪ್ರಥಮ ರಸ್ತೆಯವರೆಗೂ ಹಾಗೂ ಮತ್ತೂರು ಜಂಕ್ಷನ್‌ವರೆಗೂ ಸಾಗಿದ ಮೆರವಣಿಗೆ ಮತ್ತೂರು ಜಂಕ್ಷನ್‌ನಲ್ಲಿರುವ ಅರಳಿಕಟ್ಟೆಗೆ ಪೂಜೆ ಸಲ್ಲಿಸಿದ ಬಳಿಕ ಕಿರುಗೂರಿನ ಚಾಮುಂಡಿ ಕೋಟ ಕೆರೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಶ್ರೀ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ದೇವರ ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು. ಪ್ರಸಕ್ತ ವರ್ಷದ ಗಣೇಶನ ಮೂರ್ತಿ ಹಾಗೂ ಒಂದು ದಿನದ ಊಟದ ವ್ಯವಸ್ಥೆಯನ್ನು ಪಿ. ಆರ್. ಮುಕುಂದ ಹಾಗೂ ಪಿ. ಎಸ್.ಹರೀಶ್ ಅವರು ಭಕ್ತಾದಿಗಳಿಗೆ ಕಲ್ಪಿಸಿದ್ದರು. ಈ ಸಂದರ್ಭ ಶ್ರೀ ವಿನಾಯಕ ಬಳಗದ ಉಪಾಧ್ಯಕ್ಷ ಶಶಾಂಕ್, ಹಾಗೂ ಸದಸ್ಯರು, ಕಿರುಗೂರು ಮಹದೇವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಅಲೆಮಾಡ ಸುದೀರ್ ಮತ್ತು ಸದಸ್ಯರು, ಗ್ರಾಮಸ್ಥರು ಇದ್ದರು.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ