ಮುಸ್ಲಿಮರಿಗೆ ಮೀಸಲಿರುವ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ನಡುವೆ ರೆಸಾರ್ಟ್ ರಾಜಕೀಯ: ಕೊಡಗು ಜಿಲ್ಲಾ ಜೆಡಿಎಡ್ ಅಲ್ಪಸಂಖ್ಯಾತ ಘಟಕ ವ್ಯಂಗ್ಯ

ಮಡಿಕೇರಿ: ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಮುಸ್ಲಿಮರಿಗೆ ಮೀಸಲಿರುವ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ರೆಸಾರ್ಟ್ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು ವ್ಯಂಗ್ಯವಾಡಿದ್ದಾರೆ.
ಮಡಿಕೇರಿಯಲ್ಲಿ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಪಕ್ಷಬೇಧ ಮರೆತು ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಶೇಕಡಾ 99% ರಷ್ಟು ಮತ ಹಾಕಿದ್ದಾರೆ. ಜಿಲ್ಲೆಯ ಶಾಸಕರ ಗೆಲುವಿಗೆ ಕೊಡಗಿನ ಅಲ್ಪಸಂಖ್ಯಾತ ಮುಸ್ಲಿಮ್ ಮತದಾರರೇ ಕಾರಣ. ಆದರೆ ಕೊಡಗು ಕಾಂಗ್ರೆಸ್ ನಲ್ಲಿರುವ ಮುಸ್ಲಿಮ್ ಮುಖಂಡರು ಎಂ.ಎಲ್.ಸಿ,ನಿಗಮ ಮಂಡಳಿ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆಯಿಡದೆ ಮುಸ್ಲಿಮರಿಗೆ ಸೀಮಿತವಾದ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ.
ಕಾಂಗ್ರೆಸ್ ಮುಸ್ಲಿಂ ಮುಖಂಡರು ಕಾಂಗ್ರೆಸ್ ಪಕ್ಷದಲ್ಲಿ ಮಾತನಾಡುವ ಧೈರ್ಯ ಕಳೆದುಕೊಂಡಿದ್ದಾರೆ ಎಂದ ಅವರು,ಒಬ್ಬ ಜಮಾಅತ್ ಅಧ್ಯಕ್ಷನನ್ನು ಕೂಡ ಬದಲಾವಣೆ ಮಾಡಲು ಅಧಿಕಾವಿಲ್ಲದ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸದೆ ಕಾಂಗ್ರೆಸ್ ಶಾಸಕರಲ್ಲಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದವರು ಹೆಚ್ಚುವಾಸಿಸುತ್ತಿರುವ ಊರುಗಳ ಅಭಿವೃದ್ಧಿಗಳಿಗೆ ಅನುದಾನ ನೀಡಲು ಒತ್ತಾಯ ಮಾಡಲಿ ಎಂದು ಜಾಸೀರ್ ಮೂರ್ನಾಡು ಹೇಳಿದರು. ಕೊಡಗು ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ಮುಖಂಡರಿಗೆ ಧ್ವನಿಯಿಲ್ಲದಾಗೆ ಆಗಿದ್ದು,ಕಾಂಗ್ರೆಸ್ ಶಾಸಕರ ಹಾಗೂ ಕಾಂಗ್ರೆಸ್ ವಿರುದ್ಧ ಮಾತಾನಾಡಿದರೆ ಸಮುದಾಯದಿಂದ ಹೊರಗೆ ಎಂಬ ಭಾವನೆಯನ್ನು ಸೃಷ್ಟಿಸಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಮುಸ್ಲಿಮ್ ನಾಯಕರುಗಳು ವಕ್ಫ್ ಬೋರ್ಡ್ ಹಿಂದೆ ಹೋಗದೆ,ಅಲ್ಪಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ತರಲು ಪ್ರಯತ್ನಿಸಲಿ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೂಡ ಮುಸ್ಲಿಮರಿಗೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ನೀಡಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೂಡ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನ ಮುಸ್ಲಿಮರಿಗೆ ಮೀಸಲಿರುವ ಸ್ಥಾನ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕಾಗಿ ಬಣಗಳ ನಡುವೆ ಗುದ್ದಾಟ ನಡೆಯತ್ತಿರುವುದು ನಾಚಿಕಗೇಡಿನ ಸಂಗತಿಯಾಗಿದೆ ಎಂದು ಜಾಸೀರ್ ಮೂರ್ನಾಡು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಜೀದ್ ಚೋಕಂಡಳ್ಳಿ,ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಫುದ್ದೀನ್ ಚಾಮಿಯಾಲ,ಮಡಿಕೇರಿ ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್,ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಶಿಯಾಬುದ್ದೀನ್ ವಿಪಿಎಸ್ ಇದ್ದರು.