ಸ್ಮೃತಿ ಮಂಧಾನ–ಪಲಾಶ್ ಮುಚ್ಚಲ್ ಮದುವೆ ರದ್ದು: ದೃಢಪಡಿಸಿದ ಕ್ರಿಕೆಟರ್

ಸ್ಮೃತಿ ಮಂಧಾನ–ಪಲಾಶ್ ಮುಚ್ಚಲ್ ಮದುವೆ ರದ್ದು: ದೃಢಪಡಿಸಿದ ಕ್ರಿಕೆಟರ್

ಹೊಸದಿಲ್ಲಿ: ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಓಪನರ್‌ ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಮದುವೆ ಯೋಜನೆ ಅಧಿಕೃತವಾಗಿ ರದ್ದುಗೊಂಡಿದೆ. ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆಯುವಂತೆ ಮಂಧಾನ ಅವರು ಇನ್‌ಸ್ಟಾಗ್ರಾಮ್‌ನಲ್ಲಿನ ಪ್ರಕಟಣೆಯ ಮೂಲಕ ಈ ನಿರ್ಧಾರವನ್ನು ದೃಢಪಡಿಸಿದರು.

“ನನ್ನ ವೈಯಕ್ತಿಕ ಜೀವನದ ಕುರಿತು ಅನೇಕ ಊಹಾಪೋಹಗಳು ಹರಡುತ್ತಿವೆ. ಮದುವೆಯನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುವುದು ಅಗತ್ಯವೆನಿಸಿತು. ವಿಷಯವನ್ನು ಇಲ್ಲಿಯೇ ಮುಗಿಸಬೇಕೆಂದು ಕೇಳಿಕೊಳ್ಳುತ್ತೇನೆ. ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವುದು ನನಗೆ ಅತ್ಯಂತ ಮಹತ್ವ. ಕ್ರಿಕೆಟ್ ನನ್ನ ಮೊದಲ ಆದ್ಯತೆ, ಮತ್ತು ಮುಂದಿನ ದಿನಗಳಲ್ಲಿ ಸಂಪೂರ್ಣ ಗಮನವನ್ನು ಕ್ರೀಡೆಯಲ್ಲಿಯೇ ಕೇಂದ್ರೀಕರಿಸಲಿದ್ದೇನೆ,” ಎಂದು ತಿಳಿಸಿದರು.

ನವೆಂಬರ್‌ 23ರಂದು ಸಾಂಗ್ಲಿಯಲ್ಲಿ ನಿಗದಿ ಪಡಿಸಲಾಗಿದ್ದ ಮದುವೆಯನ್ನು, ಮಂಧಾನ ಅವರ ತಂದೆಗೆ ಸಮಾರಂಭದ ದಿನವೇ ತುರ್ತು ಆರೋಗ್ಯ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಬಳಿಕ ಪಲಾಶ್ ಅವರಿಗೆ ಸಹ ಅತಿಯಾದ ಒತ್ತಡದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪರಿಸ್ಥಿತಿಗಳನ್ನು ಪರಿಗಣಿಸಿ ಎರಡೂ ಕುಟುಂಬಗಳು ಮದುವೆಯನ್ನು ರದ್ದುಪಡಿಸಿದ್ದವು.

ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳ ಅಲೆ ಎದ್ದಿತ್ತು. ಪಲಾಶ್ ವಿರುದ್ಧ ವಂಚನೆ ಆರೋಪಗಳು ಕೇಳಿಬಂದಿದ್ದರೂ, ಅವರ ಕುಟುಂಬವು ಆರೋಪಗಳನ್ನು ತಳ್ಳಿ ಹಾಕಿ ಸುಳ್ಳು ಮಾಹಿತಿ ಹಬ್ಬಿಸುವವರಿಗೆ ಎಚ್ಚರಿಕೆ ನೀಡಿತ್ತು.

ಮಂಧಾನ ಅವರ ಪ್ರಕಟಣೆಯ ನಂತರ ಪಲಾಶ್ ಕೂಡ ಹೇಳಿಕೆ ಬಿಡುಗಡೆ ಮಾಡಿ, ಸಂಬಂಧದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು. “ಆಧಾರವಿಲ್ಲದ ಹೇಳಿಕೆಗಳು ಮತ್ತು ಮಾನಹಾನಿಕರ ಮಾಹಿತಿಯ ಹರಡುವಿಕೆ ದುಃಖಕರ. ಸುಳ್ಳು ವಿಷಯ ಹಂಚುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಅವರು ಸ್ಪಷ್ಟಪಡಿಸಿದರು.

ಮಂಧಾನ ಇನ್‌ಸ್ಟಾಗ್ರಾಮ್‌ನಲ್ಲಿ ಪಲಾಶ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಪಲಾಶ್ ಮಾತ್ರ ಇನ್ನೂ ಅವರನ್ನು ಫಾಲೋ ಮಾಡುತ್ತಿದ್ದಾರೆ. ಡಿಸೆಂಬರ್‌ 5ರಂದು ಮಂಧಾನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್‌ನಲ್ಲಿ ನಿಶ್ಚಿತಾರ್ಥದ ಉಂಗುರ ಧರಿಸದಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ಊಹಾಪೋಹಗಳಿಗೆ ಕಾರಣವಾಯಿತು.

ವೈಯಕ್ತಿಕ ಬದುಕಿನ ಈ ಸಂಕಷ್ಟಕರ ಹಂತದಲ್ಲೂ ಮಂಧಾನ ಶೀಘ್ರದಲ್ಲೇ ತಮ್ಮ ವೃತ್ತಿಜೀವನದ ಚಟುವಟಿಕೆಗಳಿಗೆ ಮರಳುತ್ತಿರುವುದಾಗಿ ತಿಳಿದು ಬಂದಿದೆ. ಜನವರಿ 9ರಂದು ನವಿ ಮುಂಬಾದಲ್ಲಿ ಆರಂಭವಾಗುವ ಮಹಿಳಾ ಪ್ರೀಮಿಯರ್‌ ಲೀಗ್‌ (WPL)‌ನಲ್ಲಿ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದಾರೆ.