ವಿದೇಶದಿಂದ ಗುಟ್ಟಾಗಿ ಬಂದು ತಾಯಿಯನ್ನೇ ಹತ್ಯೆಗೈದ ಮಗ

ವಿದೇಶದಿಂದ ಗುಟ್ಟಾಗಿ ಬಂದು ತಾಯಿಯನ್ನೇ ಹತ್ಯೆಗೈದ ಮಗ
Murder

ನವದೆಹಲಿ, ಜ. 14: ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ನಡೆದ ಮಹಿಳೆಯೊಬ್ಬರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಮೃತ ಮಹಿಳೆಯ ಸ್ವಂತ ಮಗನೇ ಹತ್ಯೆ ನಡೆಸಿರುವುದು ತನಿಖೆಯಿಂದ ದೃಢಪಟ್ಟಿದೆ. ಆರೋಪಿ ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶ್ಯಾಮಪುರ ಗ್ರಾಮದ ಸರಪಂಚ್ ಅವರ ಪತ್ನಿ ಬಲ್ಜಿಂದರ್ ಕೌರ್ ಅವರು ಡಿಸೆಂಬರ್ 24ರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಪ್ರಕರಣದಲ್ಲಿ ಯಾವುದೇ ಸ್ಪಷ್ಟ ಸುಳಿವು ದೊರೆಯದ ಕಾರಣ ತನಿಖೆಯನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಗಿತ್ತು.

ಪೊಲೀಸರು ತಾಂತ್ರಿಕ ಪುರಾವೆಗಳು, ಮೊಬೈಲ್ ಕರೆ ವಿವರಗಳು ಹಾಗೂ ಸ್ಥಳ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ, ಮೃತ ಮಹಿಳೆಯ ಪುತ್ರ ಗೋಮಿತ್ ಡಿಸೆಂಬರ್ 18ರಂದು ಇಂಗ್ಲೆಂಡ್‌ನಿಂದ ಕುಟುಂಬದವರಿಗೆ ತಿಳಿಸದೇ ಭಾರತಕ್ಕೆ ಮರಳಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಆತ ತನ್ನ ಸ್ನೇಹಿತನ ಸಹಾಯದಿಂದ ಅದೇ ಊರಿನಲ್ಲಿ ಗುಪ್ತವಾಗಿ ತಂಗಿದ್ದನು ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಗೋಮಿತ್ ಮತ್ತು ಆತನ ತಾಯಿ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹ ಇತ್ತು. ಬೇರೆ ಜಾತಿಯ ಯುವತಿಯೊಂದಿಗಿನ ಗೋಮಿತ್‌ನ ಸಂಬಂಧವನ್ನು ತಾಯಿ ವಿರೋಧಿಸಿದ್ದರಿಂದ ಮನಸ್ತಾಪ ತೀವ್ರಗೊಂಡಿತ್ತು. ಈ ಹಿನ್ನೆಲೆ ಅವನನ್ನು ಅಧ್ಯಯನ ವೀಸಾದ ಮೇಲೆ ವಿದೇಶಕ್ಕೆ ಕಳುಹಿಸಲಾಗಿತ್ತು. ಆದರೂ ತಾಯಿಯ ಮೇಲಿನ ಅಸಮಾಧಾನ ಮುಂದುವರಿದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಡಿಸೆಂಬರ್ 24ರಂದು ಗೋಮಿತ್ ತನ್ನ ಮನೆ ಹಿಂಭಾಗದ ದನದ ಕೊಟ್ಟಿಗೆಯಲ್ಲಿ ಅಡಗಿ ಕುಳಿತಿದ್ದನು. ರಾತ್ರಿ ವೇಳೆ ಮನೆಗೆ ನುಗ್ಗಿ ತಾಯಿಯ ಕತ್ತು ಹಿಸುಕಿ ಹತ್ಯೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಬಳಿಕ ಹತ್ಯೆಯನ್ನು ಆಕಸ್ಮಿಕ ಸಾವೆಂದು ತೋರಿಸಲು ಶವವನ್ನು ನೀರಿನ ಟ್ಯಾಂಕ್‌ಗೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಸ್ನೇಹಿತನ ಪಾತ್ರದ ಕುರಿತೂ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.