ಪಾರಂಪರಿಕ ನಗರ ಅಭಿವೃದ್ಧಿ ಕಾನೂನು ನೀತಿ ರೂಪಿಸಲು ಯದುವೀರ್ ಆಗ್ರಹ: ಸಂಸತ್ ಕಲಾಪದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡ ಮೈಸೂರು-ಕೊಡಗು ಸಂಸದ
ನವದೆಹಲಿ, ಡಿ. 11: ಸಾಂಸ್ಕೃತಿಕ ರಾಜಧಾನಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ ಮುಂದಾಗಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ.
ಸಂಸತ್ತಿನ ಕಲಾಪದಲ್ಲಿ ಗುರುವಾರ ನಡೆದ ಕಲಾಪದ ಚರ್ಚೆಯಲ್ಲಿ ಭಾಷಣ ಮಾಡಿದ ಸಂಸದರು, ಮೈಸೂರು ಸೇರಿದಂತೆ ಭಾರತದ ಪಾರಂಪರಿಕ ನಗರಗಳು ಈಗ ಸಾಕಷ್ಟು ಆತಂಕ ಎದುರಿಸುತ್ತಿವೆ. ಅನಿಯಂತ್ರಿತ, ಅವೈಜ್ಞಾನಿಕ ನಗರೀಕರಣದಿಂದ ಸಮಸ್ಯೆ ಎದುರಾಗಿದೆ ಎಂದರು.
ಈ ಮೂಲಕ ಪಾರಂಪರಿಕತೆ ಬೆಳೆಸಲು ಸೂಕ್ತವಾಗಿ ಕಾನೂನು ಚೌಕಟ್ಟು, ನೀತಿ ರೂಪಿಸಲು ನಗರಾಭಿವೃದ್ಧಿ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಯದುವೀರ್ ತಿಳಿಸಿದರು.
ಖಾಸಗಿ ಪಾಲುದಾರಿಕೆಯಲ್ಲಿ ಪರಿಣಾಮಕಾರಿ ಪಾರಂಪರಿಕ ಸಂರಕ್ಷಣೆ, ಡಿಜಿಟಲ್ ಮ್ಯಾಪಿಂಗ್, ನಗರ ವಸಾಹತು, ನಾಗರಿಕತೆ ಸಂರಕ್ಷಿಸಬೇಕಾಗಿದೆ. ನಮ್ಮ ಸಂಸ್ಕೃತಿ, ಸ್ಮರಣೆ, ಭಂಡಾರಗಳನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದರು.
