ಕಕ್ಕಬ್ಬೆ ಯುವಕಪಾಡಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮನೆ ಮೇಲೆ ಉರುಳಿ ಬಿದ್ದ ತೆಂಗಿನ ಮರ,ಮನೆಯ ಮಂದಿ ಅಪಾಯದಿಂದ ಪಾರು

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಸಮೀಪದ ಕಕ್ಕಬೆ-ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದ ಕುಡಿಯರ ಕಾಲೋನಿಯಲ್ಲಿ ಕಾಡಾನೆ ದಾಂಧಲೆಯಿಂದ ತೆಂಗಿನ ಮರವೊಂದು ಗ್ರಾಮದ ನಿವಾಸಿ ಕುಡಿಯರ ಗಣೇಶ್ ಅವರ ಮನೆಯ ಮೇಲೆ ಉರುಳಿ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಗ್ರಾಮದಲ್ಲಿ ನಿರಂತರ ಕಾಡಾನೆ ದಾಳಿ ನಡೆಸಿದ್ದು ಮನೆಯ ಸುತ್ತಮುತ್ತಲಿನ ತೋಟಗಳಲ್ಲಿ ಆಡ್ಡಾಡಿ ಕೃಷಿ ಗಿಡಗಳನ್ನು ತುಳಿದು ನಷ್ಟ ಉಂಟುಮಾಡಿದೆ. ಕಾಡಾನೆ ದಾಳಿಯ ಸಂದರ್ಭ ಗಣೇಶ್ ಅವರ ಕುಟುಂಬದ ಸದಸ್ಯರು ಕಾರ್ಯನಿಮಿತ್ತ ಬೇರೆಡೆ ತೆರಳಿದ್ದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಗ್ರಾಮದ ನಿವಾಸಿ ಹಾಗೂ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಅವರು ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಕಾಡಾನೆ ದಾಳಿಯಿಂದಲೇ ಈ ಭಾಗದಲ್ಲಿ ವಾಸಿಸುವ ಸಾಕಷ್ಟು ಮನೆಗಳು ಹಾಗೂ ಕೃಷಿ ಫಸಲುಗಳು ಹಾನಿಗೀಡಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ತೋಟಗಳು ಕಾಡಾನೆಗಳ ದಾಳಿಯಿಂದ ಹಾನಿಯಾಗಿವೆ.ಗ್ರಾಮದಲ್ಲಿ ಒಂಟಿ ಸಲಗ ಅಡ್ಡಾಡುತ್ತಿದ್ದು ಪ್ರತಿವರ್ಷ ಇದರಿಂದ ಗ್ರಾಮಸ್ಥರಿಗೆ ಸಮಸ್ಯೆ ಉಂಟಾಗಿದೆ. ಒಂಟಿ ಸಲಗವನ್ನ ಹಿಡಿಯಲು ಕೇಂದ್ರ ಸರ್ಕಾರದಿಂದ ಆದೇಶವಾಗಿದ್ದರೂ ಅರಣ್ಯ ಇಲಾಖೆ ಆನೆ ಸೆರೆಹಿಡಿಯಲು ವಿಫಲವಾಗಿದೆ. ಆನೆ ದಾಳಿಯಿಂದ ಹಾನಿಗೊಳಗಾದ ಮನೆಯನ್ನ ಪುನಃ ನಿರ್ಮಿಸಲು ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಅಗತ್ಯವಿದೆ. 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮುತ್ತಪ್ಪ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಕುಡಿಯರ ಭರತ್ ಚಂದ್ರ ದೇವಯ್ಯ ಮಾತನಾಡಿ ಗ್ರಾಮದಲ್ಲಿ ನಿರಂತರ ಕಾಡಾನೆ ಹಾವಳಿ ನಡೆಸುತ್ತಿದ್ದೆ. ಕಾಡಾನೆ ದಾಳಿಯಿಂದ ಮನೆ ಮೇಲೆ ತೆಂಗಿನ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಗ್ರಾಮದಲ್ಲಿ ನಿರಂತರ ಕಾಡಾನೆ ದಾಳಿ ನಡೆಸುತ್ತಿದ್ದರು ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆನೆ ದಾಳಿಯಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಸ್ಥಳದಲ್ಲಿ ಪರಿಹಾರ ಒದಗಿಸುವ ಕಾರ್ಯಕ್ಕೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಭರತ್ ಚಂದ್ರ ದೇವಯ್ಯ ಒತ್ತಾಯಿಸಿದ್ದಾರೆ. ಅಂಜ್ಜಂದಿರ ಕಾಲದಿಂದ ನಾವು ಇಲ್ಲಿ ವಾಸಿಸುತ್ತಿದ್ದು ಗ್ರಾಮದಲ್ಲಿ ನಿರಂತರ ಕಾಡಾನೆ ಹಾವಳಿ ನಡೆಸಿ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿದೆ.ಅಲ್ಲದೆ ನಮ್ಮ ಮನೆ ಪಕ್ಕದಲ್ಲಿದ್ದ ತೆಂಗಿನ ಮರವನ್ನು ಕಾಡಾನೆ ದಾಳಿ ನಡೆಸಿ ನಮ್ಮ ವಾಸದ ಮನೆಯ ಮೇಲೆ ಉರುಳಿಸಿದೆ. ಇದರಿಂದ ಮನೆ ಧ್ವಂಸಗೊಂಡು ಅಪಾರ ನಷ್ಟ ಸಂಭವಿಸಿದೆ ಎಂದು ಮನೆ ಕಳೆದುಕೊಂಡ ಸಂತ್ರಸ್ತರಾದ ಕುಡಿಯರ ಬಿದ್ದಪ್ಪ ಹಾಗೂ ಗಣೇಶ್ ಅಳಲು ತೋಡಿಕೊಂಡಿದ್ದಾರೆ. ಈ ವ್ಯಾಪ್ತಿಯ ಗ್ರಾಮದ ತೋಟಗಳಲ್ಲಿ ಕಾಡಾನೆ ದಾಳಿಯಿಂದ ನಷ್ಟ ಸಂಭವಿಸಿದ ಬೆಳೆಗಾರರಿಗೆ ಹಾಗೂ ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಕೂಡಲೆ ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.