ಭರತನಾಟ್ಯ ಕಲಾವಿದೆ ಕೊಂಪುಳಿರ ಪಿ.ದಿಥ್ಯಗೆ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ

ಮಡಿಕೇರಿ:ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ವಿರಾಜಪೇಟೆಯ ಪುಟ್ಟ ಪೋರಿ ಭರತನಾಟ್ಯ ಕಲಾವಿದೆ ಕೊಂಪುಳಿರ.ಪಿ.ದಿಥ್ಯ ಗೆ ಸ್ಟಾರ್ ಆಫ್ ಕರ್ನಾಟಕ-2025 ರ ಪ್ರಶಸ್ತಿ ಗರಿ ಲಭಿಸಿದೆ. ವಿರಾಜಪೇಟೆಯ ನಾಟ್ಯಾಂಜಲಿ ನಾಟ್ಯ ನೃತ್ಯ ಶಾಲೆಯಲ್ಲಿ ತನ್ನ ಚಿಕ್ಕ ವಯಸ್ಸಿಗೆ ಅಮೋಘ ಪ್ರತಿಭೆ ಕಂಡು ಗುರುಗಳಾದ ವಿದುಷಿ ಹೇಮಾವತಿ ಮತ್ತು ಕಾವ್ಯ ಇವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ತನ್ನ ಈ ಸಾಧನೆಯನ್ನು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಿಥ್ಯಳ ಪ್ರತಿಭೆಯನ್ನು ಗಣ್ಯರು ಗುರುತಿಸಿದ್ದು ಬಳಿಕ ಈ ರಾಜ್ಯಮಟ್ಟದ ಪ್ರಶಸ್ತಿಗೆ ತನ್ನ ಸಣ್ಣ ವಯಸ್ಸಿನಲ್ಲೇ ಆಯ್ಕೆಯಾದರು. ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಹಾಗೂ ದಿನೇಶ್ ಫೌಂಡೇಶನ್ ಸಹಯೋಗದೊಂದಿಗೆ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಜೆಎಸ್‍ಎಸ್ ಶಾಲಾ ಆವರಣದಲ್ಲಿರುವ ಶ್ರೀ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆದ ಕನ್ನಡ ಸಾಹಿತ್ಯ ಸಂಭ್ರಮ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಂಪುಳಿರ.ಪಿ.ದಿಥ್ಯ ಗೆ ಸ್ಟಾರ್ ಆಫ್ ಕರ್ನಾಟಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿಥ್ಯ ವಿರಾಜಪೇಟೆ ಪಟ್ಟಣದ ವಿನಾಯಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಇಲ್ಲಿನ ಚಿಕ್ಕಪೇಟೆಯ ನಿವಾಸಿ ನಿವೃತ್ತ ಶಿಕ್ಷಕರುಗಳಾದ ಕೊಂಫುಳಿರ ಯು ಪಳಂಗಪ್ಪ, ತಾರಾಮಣಿ ಅವರ ಮೊಮ್ಮಗಳು ಹಾಗೂ ಪೃಥ್ವಿ ಕುಮಾರ್, ಭವ್ಯ ದಂಪತಿಯ ಪುತ್ರಿ.