ಮುಸಲ್ಮಾನರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ: ಜಬ್ಬಾರ್ ಕಲಬುರ್ಗಿ

ಮುಸಲ್ಮಾನರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ: ಜಬ್ಬಾರ್ ಕಲಬುರ್ಗಿ

ಕುಶಾಲನಗರ: ಕರ್ನಾಟಕದಲ್ಲಿ ಒಂದು ಕೋಟಿ ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಉದ್ಯೋಗದಿಂದ ಹಿಂದುಳಿದಿದ್ದಾರೆ. ಸರ್ಕಾರ ಮುಸಲ್ಮಾನರ ಕಲ್ಯಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕರ್ಣಾಟಕ ಮುಸ್ಲಿಂ ಯೂನಿಟಿ ರಾಜ್ಯಾಧ್ಯಕ್ಷರಾದ ಜಬ್ಬಾರ್ ಕಲಬುರ್ಗಿ ಮಾತನಾಡಿದರು. 

ಕೊಡಗು ಜಿಲ್ಲೆಯ ಕರ್ನಾಟಕ ಮುಸ್ಲಿಂ ಯೂನಿಟಿ ವತಿಯಿಂದ ಏರ್ಪಡಿಸಲಾಗಿದ್ದ "ಮುಸ್ಲಿಂ ಜಾಗೃತಿ ಸಮಾಲೋಚನಾ ಸಭೆ"ಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಬಡತನ, ನಿರುದ್ಯೋಗ ಹಾಹೂ ಅನಕ್ಷರತೆಯಿಂದ ನಲುಗುತ್ತಿದ್ದಾರೆ. ಕೇವಲ ವೋಟ್ ಬ್ಯಾಂಕಿಗೋಸ್ಕರ ಮಾತ್ರ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರಗಳು ಅಧಿಕಾರಕ್ಕೇರಿತ ನಂತರ ತಾವು ನೀಡಿದ ಭರವಸೆ, ನಂಬಿಕೆ, ವಿಶ್ವಾಸವನ್ನು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರ ೨ಬಿ ಮೀಸಲಾತಿಯನ್ನು ಮುಂದುವರೆಸಬೇಕು ಎಂದರು. 

ಸರ್ಕಾರ ಮುಸ್ಕಿಂ ಸಮುದಾಯವನ್ನು ಕಡೆಗಣಿಸಿದೆ. ೮೮ ರಿಂದ ೯೦ ಶೇಕಡ ಸಮುದಾಯದ ಮತಗಳನ್ನು ಪಡೆದಿರುವ ಸರ್ಕಾರ, ಮುಸ್ಲಿಮರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಆದ್ದರಿಂದ ಎಲ್ಲರೂ ತಮ್ಮ ಹಕ್ಕುಗಳಿಗೆ ಒತ್ತಾಯಿಸಬೇಕು. ಎಲ್ಲರೂ ಸರ್ಕಾರವನ್ನು ಪ್ರಶ್ನಿಸುವಂತಾಗಬೇಕು. ಅದಕ್ಕೆ ಮೊದಲು ನಾವು ಒಗ್ಗೂಡಿ ಸಂಘಟಿತರಾಗಬೇಕು ಎಂದರು. 

ಕರ್ನಾಟಕ ಮುಸ್ಲಿಂ ಯೂನಿಟಿ ಗೌರವಾಧ್ಯಕ್ಷರಾದ ಜಿ.ಎ.ಬಾವಾ ಮಾತನಾಡಿ, ದೇಶಾದ್ಯಂತ ಮುಸ್ಲಿಂ ಸಮುದಾಯ ಶೋಷಣೆಗೆ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಿದೆ. ಕರ್ನಾಟಕದಲ್ಲಿ ಮುಸಲ್ಮಾನರ ಮೀಸಲಾತಿಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿತು. ಆದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ೨ಬಿ ಮೀಸಲಾತಿ ಬಗ್ಗೆ ಜಾಣಮೌನ ವಹಿಸಿದೆ. ಇವರಿಗೂ ಬಿಜೆಪಿಯವರಿಗೂ ವ್ಯತ್ಯಾಸವೇನು. ಸರ್ಕಾರ ಮುಸ್ಲಿಮರ ಹಕ್ಕೊತ್ತಾಯಗಳಿಗೆ ಸಹಕರಿಸಬೇಕು ಎಂದರು. 

ನಂತರ ವೇದಿಕೆಯಲ್ಲಿದ್ದ ಗಣ್ಯರು, ಸದ್ಯದ ಪರಿಸ್ಥಿತಿಯಲ್ಲಿ ಮುಸಲ್ಮಾನರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು. 

ಇದೇ ಸಂದರ್ಭ ಕರ್ನಾಟಕ ಮುಸ್ಲಿಂ ಯೂನಿಟಿಯ ಕೊಡಗು ಜಿಲ್ಲೆಯ ಅಧ್ಯಕ್ಷರಾದಿ ಕೆ.ಎ.ಯಾಕೂಬ್ ಅವರನ್ನು ಹಾಗೂ ಕೊಡಗು ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಅಮೀನ್ ಮೊಹ್ಸಿನ್ ಅವರನ್ನು ಆಯ್ಕೆ ಮಾಡಲಾಯಿತು. 

ವೇದಿಕೆಯಲ್ಲಿ ಕರ್ನಾಟಕ ಮುಸ್ಲಿಂ ಯೂನಿಟಿ ರಾಜ್ಯ ಉಪಾಧ್ಯಕ್ಷರಾದ ನಾಸಿರ್ ಇಂಪಾಳ್, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಎನ್.ಎಮ್.ನೂರ್ ಅಹ್ಮದ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಫರಹಾನ ನಿಗಾರಬೇಗಂ, ಮಂಗಳೂರು ಜಿಲ್ಲಾಧ್ಯಕ್ಷರಾದ ನಾಸಿರ್ ಲಕ್ಕಿಸ್ಟಾರ್, ಸಂಘಟನೆಯ ಕಿತ್ತೂರು ಕರ್ನಾಟಕ ಸಂಚಾಲಕರಾದ ಮೆಹಬೂಬ್ ಸರಕವಾಸ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅಮ್ಜರ್ ಅಹ್ಮದ್ ಹಾಗೂ ಇನ್ನಿತರರು ಇದ್ದರು. 

ಶುಂಠಿಕೊಪ್ಪದ ಅಬ್ದುಲ್ ಹಮೀದ್ ಪ್ರಾರ್ಥಿಸಿದರು. ಕೆ.ಎ.ಯಾಕೂಬ್ ಸ್ವಾಗತಿಸಿದರು. ಅಬ್ದುಲ್ ಮಜೀದ್ ಅವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯ ಮುಸ್ಲಿಂ ನೇತಾರರು, ಜನಪ್ರತಿನಿಧಿಗಳು, ವಿವಿಧ ಪಕ್ಷದ ಮುಖಂಡರು ಭಾಗವಹಿಸಿದ್ದರು.