ನಾಪೋಕ್ಲು: ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ,ಜನರಿಗೆ ಜಾಗೃತಿ ಮೂಡಿಸಿದ ಪಿಎಸ್ಐ ರಾಘವೇಂದ್ರ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು: ಸಾರ್ವಜನಿಕರ ಸಮಸ್ಯೆ ಹಾಗೂ ದೂರೂಗಳನ್ನು ಆಲಿಸಲು ಪೊಲೀಸರೇ, ಮನೆ ಬಾಗಿಲಿಗೆ ತೆರಳುವ ವಿನೂತನ ಪರಿಕಲ್ಪನೆಯಾಗಿರುವ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ನಾಪೋಕ್ಲುವಿನಲ್ಲಿ ಚಾಲನೆ ನೀಡಲಾಯಿತು.
ನಾಪೋಕ್ಲು ಠಾಣಾಧಿಕಾರಿ ಪಿ.ಜಿ.ರಾಘವೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾನಗರದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪೊಲೀಸ್ ಇಲಾಖೆಯ ವಿನೂತನ ಜನಸ್ನೇಹಿ ಕಾರ್ಯಕ್ರಮವಾಗಿರುವ ಮನೆಮನೆಗೆ ಪೊಲೀಸರು ಈ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದ ನಾಪೋಕ್ಲು ಠಾಣಾಧಿಕಾರಿ ಪಿ.ಜಿ. ರಾಘವೇಂದ್ರ ಅವರು ಮನೆ ಮನೆಗೆ ಪೊಲೀಸರು ಎಂಬ ರಾಜ್ಯ ಸರ್ಕಾರದ ವಿನೂತನ ಪರಿಕಲ್ಪನೆಯ ಜನಸ್ನೇಹಿ ಕಾರ್ಯಕ್ರಮವಾಗಿದೆ. ಪೊಲೀಸರಿಂದ ಠಾಣಾವ್ಯಾಪ್ತಿಯಲ್ಲಿರುವ ಜನರಿಗೆ ಈ ಕಾರ್ಯಕ್ರಮದ ಮೂಲಕ ಹೆಚ್ಚಿನ ಸೇವೆ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ನಾವು ಠಾಣಾ ವ್ಯಾಪ್ತಿಯ ಎಲ್ಲಾ ಮನೆಮನೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆ ಹಾಗೂ ದೂರುಗಳನ್ನು ಪಡೆಯಲಿದ್ದೇವೆ ಎಂದರು.ಕಾರ್ಯಕ್ರಮದ ಅಂಗವಾಗಿ ಠಾಣೆಯ ಸಿಬ್ಬಂದಿಗಳು ಇಂದಿರಾನಗರ ಹಾಗೂ ಹೊದವಾಡ, ಚೆರಿಯಪರಂಬು ಗ್ರಾಮದ ಮನೆಮನೆಗಳಿಗೆ ತೆರಳಿ ಸೈಬರ್ ಅಪರಾಧ, ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ, ಬಾಲಪರಾಧ, ಪೋಕ್ಸೋ ಕಾಯ್ದೆ, ಕಳ್ಳತನ ಪ್ರಕರಣ, ರಸ್ತೆ ಸಂಚಾರ ನಿಯಮ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಭಿಯಾನದ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು. ಬಳಿಕ ಮನೆಗಳಲ್ಲಿರುವವರ ಮಾಹಿತಿಗಳನ್ನು ಕಲೆಹಾಕಿದರು.
ಈ ಸಂದರ್ಭ ನಾಪೋಕ್ಲು ಠಾಣೆಯ ಸಹಾಯಕ ಠಾಣಾಧಿಕಾರಿಗಳಾದ ಫ್ರಾನ್ಸಿಸ್, ಪ್ರಕಾಶ್, ಮುಖ್ಯಪೇದೆ ವಿಜಯಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಖುರೇಶಿ, ಕಾಳೆಯಂಡ ಸಾಬ ತಿಮ್ಮಯ್ಯ ಸೇರಿದಂತೆ ಠಾಣೆಯ ಸಿಬ್ಬಂದಿಗಳು,ಗ್ರಾಮಸ್ಥರು ಹಾಜರಿದ್ದರು.