ದೇಹ ದಂಡಿಸಿ ಆರೋಗ್ಯ ಕಾಪಾಡಲು ಠಾಣಾಧಿಕಾರಿ ಗಣೇಶ್ ಕರೆ: ಕುಶಾಲನಗರದಲ್ಲಿ ದೇಹದಾರ್ಡ್ಯ ಸ್ಪರ್ಧೆ

ಕುಶಾಲನಗರ : ದೇಹವನ್ನು ಹೆಚ್ಚಾಗಿ ದಂಡಿಸುವ ಮೂಲಕ ಆರೋಗ್ಯಕ್ಕೆ ಒತ್ತು ನೀಡಬೇಕೆಂದು ಕುಶಾಲನಗರ ಸಂಚಾರ ಠಾಣೆ ಠಾಣಾಧಿಕಾರಿ ಗಣೇಶ್ ಕರೆಕೊಟ್ಟರು.ಕುಶಾಲನಗರದ ಬಿಎಂ ರಸ್ತೆಯಲ್ಲಿರುವ ಲೈಟ್ ವೈಯ್ಟ್ ಜಿಮ್ಮಿನ ದ್ವೈ ವಾರ್ಷಿಕೋತ್ಸವದ ಅಂಗವಾಗಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನಗರದ ಸಿಟಿಪಾಯಿಂಟ್ ಕಟ್ಟಡದ ಸಭಾಂಗಣದಲ್ಲಿ ನಡೆದ ಸ್ಪರ್ಧೆಯು ಪ್ರತೀ ಸುತ್ತಿನಲ್ಲಿಯೂ ತನ್ನ ಬಿರುಸು ಹೆಚ್ಚಿಸಿಕೊಂಡು ನೋಡುಗರ ಮೈನವಿರೇಳಿಸಿತು. ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡು, ಅಂತರ್‌ಜಿಲ್ಲಾ ಮಟ್ಟಗಳಲ್ಲಿ ಹೆಸರು ಮಾಡಿರುವ ಮಿಸ್ಟರ್ ಕೊಡಗು ಪ್ರಕಾಶ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ತೀರ್ಪುಗಾರರಾಗಿ ನ್ಯೂ ಜೆನ್ ಜಿಮ್ಮಿನ ಮಾಲಿಕ ಪವನ್ ಕಾರ್ಯನಿರ್ವಹಿಸಿದರು.ಕುಶಾಲನಗರ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರಾಮಚಂದ್ರ, ಸರಿಗಮಪ ಖ್ಯಾತಿಯ ಅನ್ವಿತ್ ಮುಖ್ಯ ಅತಿಥಿಗಳಾಗಿದ್ದರು.
ಜಿಮ್ಮಿನ ಆಂತರಿಕ ಸ್ಪರ್ಧಿಗಳಿಗಾಗಿ ಆಯೋಜಿಸಿದ ಸ್ಪರ್ಧೆಯಾಗಿದ್ದರೂ ಜಿಲ್ಲಾ ಮಟ್ಟದ ರೀತಿಯಲ್ಲಿ ಎಲ್ಲಾ ವಿಧಿ-ವಿಧಾನಗಳನ್ನು ಅಳವಡಿಸಿಕೊಂಡು ಅರ್ಥಪೂರ್ಣವಾಗಿ ಮೂಡಿ ಬಂತು. ಸುಮಾರು ಇಪ್ಪತ್ತೈದು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಚಾಂಪಿಯನ್ ಪಟ್ಟವನ್ನು ಆತಿಥೇಯ ಜಿಮ್ಮಿನ ಮಂಜು ಅಲಂಕರಿಸಿದರೆ,
ಬೆಸ್ಟ್ ಪೋಸರ್ ಪಟ್ಟವನ್ನು ರಜಾಕ್, ಹಾಗೆಯೇ ಮೋಸ್ಟ್ ಮಸ್ಕ್ಯುಲರ್ ಬಿರುದನ್ನು ಶ್ರೀ ಆನಂದ್ ಪಡೆದುಕೊಂಡರು. ಪ್ರತೀ ಸುತ್ತಿನಲ್ಲಿಯೂ ವಿಜೇತರನ್ನು ಆರಿಸಿ, ಅಂತಿಮ ಸುತ್ತಿನಲ್ಲಿ ನಡೆದ ವಿಜೇತರ ಹಣಾಹಣಿ ಬಹಳ ರೋಮಾಂಚನಕಾರಿಯಾಗಿತ್ತು. ಭಾಗವಹಿಸಿದ ಪ್ರತಿಯೊಬ್ಬರಿಗೂ ಬಹುಮಾನ ವಿತರಣೆ ಮಾಡಲಾಯಿತು. ಕಾಫಿ ಉದ್ಯಮಿ ರಫೀಕ್ ಕಾಫಿಕಾಂ, ಎಸ್ ಎಲ್ ಎನ್ ಲೆವಿಸ್ಟಾ ಕಾಫಿ ಮೆನೇಜರ್ ಸೋಮಯ್ಯ, ನಾಗೇಶ್, ಕಿರಣ್, ವಿನು ತಿಮ್ಮಯ್ಯ, ಇಫ್ತಿಕಾರ್ ಅತಿಥಿಗಳಾಗಿ ಆಗಮಿಸಿದ್ದರು.ವಿದ್ಯಾರ್ಥಿ ದರ್ಶನ್ ಕಾರ್ಯಕ್ರಮ ನಿರೂಪಿಸಿದರು.