ಪೊನ್ನಂಪೇಟೆ: ಹುದಿಕೇರಿಯಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ,ಸ್ಥಳಕ್ಕೆ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ, ಪರಿಶೀಲನೆ

ಹುದಿಕೇರಿ :-ಮೇಯಲು ಬಿಟ್ಟ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ, ಕರುವೊಂದನ್ನು ಕೊಂದು ಹಾಕಿ, ಎರಡು ಹಸುಗಳನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮದಲ್ಲಿ ನಡೆದಿತ್ತು. ಹುದಿಕೇರಿ ಗ್ರಾಮದ ಕುಂಜ್ಞಪಂಡ ಗುಲಾಬಿ ಎಂಬುವರಿಗೆ ಸೇರಿದ ಮೂರು ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿ, ಕರುವೊಂದನ್ನು ಕೊಂದು ಹಾಕಿ ಅರ್ಧಭಾಗ ತಿಂದುಹಾಕಿ, ಉಳಿದ ಎರಡು ಹಸುಗಳನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಜಾನುವಾರು ಕಳೆದುಕೊಂಡ ಹುದಿಕೇರಿ ಗ್ರಾಮದ ಕುಂಜ್ಞಪಂಡ ಗುಲಾಬಿ ಅವರ ಮನೆಗೆ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭ ಪೊನ್ನಂಪೇಟೆ ಅರಣ್ಯ ಇಲಾಖಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಘಟನೆಯ ಬಗ್ಗೆ ಮಾಹಿತಿ ಪಡೆದು, ಮಾತನಾಡಿ ಘಟನಾ ಸ್ಥಳದಲ್ಲೆ ಇದ್ದು, ಹುಲಿಯ ಚಲನವಲನಗಳನ್ನು ಕಂಡು ಹಿಡಿದು ಕೂಡಲೇ ಹುಲಿಯನ್ನು ಸೆರೆ ಹಿಡಿಯುವ ಕೆಲಸ ಮಾಡಬೇಡಬೇಕೆಂದರಲ್ಲದೆ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಅರಣ್ಯ ಸಚಿವರೊಂದಿಗೆ ಚರ್ಚಿಸಿದ ಮೇರೆಗೆ ಹುಲಿಯನ್ನು ಸೆರೆಹಿಡಿಯಲು ಸಚಿವರು ಅನುಮತಿ ನೀಡಿದ್ದು, ಜಾನುವಾರುಗಳ ಮೇಲೆ ದಾಳಿ ನಡೆಸಿದ ಹುಲಿ ಸೆರೆಗೆ ಶೀಘ್ರ ಕಾರ್ಯಾಚರಣೆ ನಡೆಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಗ್ರಾಮದ ನಿವಾಸಿ ಗುಂಬಿರ ಗಾಂಧಿ ಎಂಬುವರ ತೋಟದಲ್ಲಿದ್ದ ಹಸುವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ಹಸುವಿನ ಮಾಲೀಕರಾದ ಕುಂಜ್ಞಪಂಡ ಗುಲಾಬಿ ಅವರ ಕೊಟ್ಟಿಗೆಗೆ ತಂದು, ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ. ಎಂ ಶಂಕರ್ ಅವರು ಪಶುವೈದ್ಯಾಧಿಕಾರಿ ಡಾ. ಚಂದ್ರ ಶೇಖರ್ ಅವರನ್ನು ಸ್ಥಳಕ್ಕೆ ಕರೆಸಿ ಎರಡು ಹಸುಗಳಿಗೆ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಚಂಗುಲಂಡ ಸೂರಜ್ ಹಾಗೂ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ. ಎಂ ಶಂಕರ್, ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.
ವರದಿ: ಚಂಪಾ ಗಗನ, ಪೊನ್ನಂಪೇಟೆ