ಆದರ್ಶ ಆಡಳಿತಗಾರ ಕೆಂಪೇಗೌಡರ ನಿಷ್ಠೆ ಮತ್ತು ಪರಿಶ್ರಮ ಸ್ಮರಣೀಯ:ಉಸ್ತುವಾರಿ ಸಚಿವ ಭೋಸರಾಜು

ಆದರ್ಶ ಆಡಳಿತಗಾರ ಕೆಂಪೇಗೌಡರ ನಿಷ್ಠೆ ಮತ್ತು ಪರಿಶ್ರಮ ಸ್ಮರಣೀಯ:ಉಸ್ತುವಾರಿ ಸಚಿವ  ಭೋಸರಾಜು

ಮಡಿಕೇರಿ:ಇಡೀ ದಕ್ಷಿಣ ಭಾರತದಲ್ಲಿ ಉತ್ತಮ ನಗರ ನಿರ್ಮಾಣ ಮಾಡುವಲ್ಲಿ ಆದರ್ಶ ಆಡಳಿತಗಾರ ಕೆಂಪೇಗೌಡರ ನಿಷ್ಠೆ ಮತ್ತು ಪರಿಶ್ರಮವನ್ನು ಸದಾ ಸ್ಮರಿಸುವಂತಾಗಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಹೇಳಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಶುಕ್ರವಾರ ನಗರದ ಗಾಂಧಿ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೆಂಗಳೂರು ನಿರ್ಮಾಣದಲ್ಲಿ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಅವರ ಬದ್ಧತೆಯನ್ನು ಸ್ಮರಿಸುವಂತಾಗಬೇಕು ಎಂದು ಸಚಿವರು ತಿಳಿಸಿದರು.  

  ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಕೆಂಪೇಗೌಡರು ನಾಡುಕಂಡಂತಹ ಆದರ್ಶ ಆಡಳಿತಗಾರರಾಗಿ ಬೆಂಗಳೂರು ನಿರ್ಮಾಣಕ್ಕೆ ಅಗಾಧ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಅವರ ದೂರದೃಷ್ಟಿ ಮತ್ತು ಪರಿಕಲ್ಪನೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕಿದೆ ಎಂದರು.     

ಕೆಂಪೇಗೌಡರ ಆಡಳಿತ ಅವಧಿಯಲ್ಲಿ 13 ರಿಂದ 14 ಸಾವಿರ ಕೆರೆಗಳನ್ನು ನಿರ್ಮಿಸಿ ಸಮೃದ್ಧ ನಗರ ನಿರ್ಮಾಣಕ್ಕೆ ಶ್ರಮಿಸಿದ್ದರು. ಈಗ 150 ರಿಂದ 200 ಕೆರೆಗಳು ಮಾತ್ರ ಇವೆ. ಹಿಂದೆ ಕೆರೆಗಳ ಸಮೃದ್ಧಿಯಿಂದಲೇ ಕುಡಿಯುವ ನೀರು ಮತ್ತು ಅಂತರ್ಜಲ ಹೆಚ್ಚಿರುವುದನ್ನು ಕಾಣಬಹುದಿತ್ತು. ಈಗ ಕುಡಿಯುವ ನೀರಿಗಾಗಿ ನದಿಮೂಲವನ್ನು ಅವಲಂಬಿಸಬೇಕಿದೆ ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು. ನಾಡಪ್ರಭು ಕೆಂಪೇಗೌಡರ ಆದರ್ಶ ಮತ್ತು ಮೌಲ್ಯಗಳಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕು. ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಹೇಳಿದರು. 

ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ 16 ನೇ ಶತಮಾನದಲ್ಲಿಯೇ ಬೆಂಗಳೂರು ಕಟ್ಟುವಲ್ಲಿ ಕೆಂಪೇಗೌಡರು ಶ್ರಮಿಸಿದ್ದಾರೆ ಎಂದು ನುಡಿದರು. ಕೆಂಪೇಗೌಡರ ಶ್ರಮದಿಂದ ಬೆಂಗಳೂರು ಉದ್ಯಾನವನವಾಗಿ, ಇಂದು ಐಟಿಬಿಟಿ ನಗರವಾಗಿ ಬೆಳೆದಿದೆ ಎಂದು ಡಾ.ಮಂತರ್ ಗೌಡ ಅವರು ಹೇಳಿದರು.  

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎಸ್.ಎಂ.ಚಂಗಪ್ಪ, ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹಂಡ್ರಂಗಿ ನಾಗರಾಜು ಅವರು ಮಾತನಾಡಿದರು. 

ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಅಂಬೆಕಲ್ ನವೀನ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪ್ರಮುಖರಾದ ಅಂಬೆಕಲ್ ಕುಶಾಲಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ, ಮಣಜೂರು ಮಂಜುನಾಥ್ ಇತರರು ಇದ್ದರು. 

ನೀಟ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 84 ನೇ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ಸ್ಥಾನ ಪಡೆದಿರುವ ಸೋಮವಾರಪೇಟೆಯ ಚೌಡ್ಲು ಗ್ರಾಮದ ವಿದ್ಯಾರ್ಥಿನಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೆಂಪೇಗೌಡ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.