ತೊರೆನೂರು : ಶುಂಠಿ ಕೃಷಿ ಕ್ಷೇತ್ರೋತ್ಸವ ಹಾಗೂ ರೈತರಿಗೆ ಜಾಗೃತಿ ಕಾರ್ಯಕ್ರಮ ಶುಂಠಿ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಜಿಂಜರ್ ವಿಶೇಷ ಲಘು ಪೋಷಕಾಂಶಗಳಿವೆ : ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವೀರೇಂದ್ರ ಕುಮಾರ್

ಕುಶಾಲನಗರ : ರೈತರು ಕೃಷಿಯಲ್ಲಿ ನಾವಿಣ್ಯತೆಯನ್ನು ಅಳವಡಿಸಿಕೊಂಡು ಹೆಚ್ಚು ಲಾಭಗಳಿಸಬೇಕು. ಯಾವುದೇ ಬೆಳೆಯಲ್ಲಿ ಸಮಸ್ಯೆ ಉದ್ಭವಿಸಿದರೂ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ತಿಳಿಸಿದರು. ಸಮೀಪದ ತೊರೆನೂರು ಗ್ರಾಮದಲ್ಲಿ ಬುಧವಾರ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ,ಕೃಷಿ ಇಲಾಖೆ ಹಾಗೂ ಪ್ರಗತಿಪರ ರೈತ ಒಕ್ಕೂಟದಿಂದ ಏರ್ಪಡಿಸಿದ್ದ ಶುಂಠಿ ಕೃಷಿ ಕ್ಷೇತ್ರೋತ್ಸವ ಹಾಗೂ ರೈತರಿಗೆ ಶುಂಠಿ ಬೆಳೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶುಂಠಿ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಲಘು ಪೋಷಕಾಂಶಗಳು ಸಹಕಾರಿಯಾಗಿದೆ.ರೈತರು ಕೃಷಿ ವಿಜ್ಞಾನ ಕೇಂದ್ರದಿಂದ ಕೈಗೊಳ್ಳುವ ಪ್ರಾತ್ಯಕ್ಷಿಕೆ, ತರಬೇತಿಗಳಲ್ಲಿ ಪಾಲ್ಗೊಂಡು ಅದರ ಪ್ರಯೋಜನವನ್ನು ಪಡೆಯಬೇಕು. ಕುಶಾಲನಗರ ತಾಲ್ಲೂಕಿನಲ್ಲಿ ಕಳೆದ ನವೆಂಬರ್, ಡಿಸೆಂಬರ್ ನಲ್ಲಿ ಶುಂಠಿ ಬೆಳೆಗೆ ಬೆಂಕಿರೋಗ ಕಾಣಿಸಿಕೊಂಡಿದ್ದು,ಈ ಅವದಿಯಲ್ಲಿ ಹೆಚ್ಚಿನ ಇಬ್ಬನಿ ಹಾಗೂ ಸಾರಜನಕ ಗೊಬ್ಬರ ಬಳಕೆಯಿಂದ ಈ ರೋಗ ಕಾಣಿಸಿಕೊಂಡಿದೆ ಎಂದರು. ಶುಂಠಿ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಲು ಜಿಂಜರ್ ವಿಶೇಷ ಲಘು ಪೋಷಕಾಂಶಗಳಿದ್ದು, ಅವುಗಳನ್ನು ಬಳಸುವುದರಿಂದ ಶುಂಠಿ ಬೆಳೆಯಲ್ಲಿನ ರೋಗ ನಿಯಂತ್ರಣದೊಂದಿಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ವಿಜ್ಞಾನ ಕೇಂದ್ರದ ವಿಷಯ ತಜ್ಞ ಬಿ. ಪ್ರಭಾಕರ್ ಮಾತನಾಡಿ, ರೈತರು ಬೆಳೆಗಳಿಗೆ ಮುಖ್ಯ ಪೋಷಕಾಂಶ ಗಳನ್ನು ಮಾತ್ರ ನೀಡುತ್ತಿದ್ದು, ಲಘು ಪೋಷಕಾಂಶಗಳ ಬಗ್ಗೆ ಗಮನ ಹರಿ ಸುತ್ತಿಲ್ಲ. ಈ ನಿಟ್ಟಿನಲ್ಲಿ ಕ್ಯಾಲಿಕಟ್‌ನಲ್ಲಿರುವ ಭಾರತೀಯ ಸಾಂಬಾರು ಸಂಶೋಧನಾ ಸಂಸ್ಥೆಯವರು ಜಿಂಜರ್ ಸ್ಪೆಷಲ್ ಲಘು ಪೋಷಕಾಂಶವನ್ನು ಪರಿಚಯಿಸಿದ್ದು, ರೈತರು ಶುಂಠಿ ನಾಟಿ ಮಾಡಿದ 45 ದಿನಗಳ ಅಂತರದಲ್ಲಿ ನಾಲ್ಕು ಹಂತಗಳಲ್ಲಿ ಆರು ತಿಂಗಳವರೆಗೆ ಪ್ರತಿ ಲೀಟರ್ ನೀರಿಗೆ 5 ಗ್ರಾಂ ನಂತೆ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಶುಂಠಿ ಬೆಳೆಯಲ್ಲಿ ಜಿಂಜರ್ ಸ್ಪೆಷಲ್ ಸಿಂಪಡಣೆ ಮಾಡುವುದರಿಂದ ಮರಿ ಕಂದುಗಳು ಜಾಸ್ತಿಯಾಗಿ, ಶುಂಠಿಯ ಗೆಡ್ಡೆಯ ಗಾತ್ರ ಹೆಚ್ಚಾಗುತ್ತದೆ. ಅಲ್ಲದೇ ಉತ್ತಮ ಗುಣಮಟ್ಟದ ಗೆಡ್ಡೆಗಳನ್ನು ಪಡೆಯಬಹುದಾಗಿದೆ ಎಂದರು. ಮಣ್ಣು ಪರೀಕ್ಷ ಕೇಂದ್ರದ ವಿಜ್ಞಾನಿ ಕೆ.ಟಿ.ಮೋಹನ್‌ಕುಮಾರ್ ಮಾತನಾಡಿ,ಶುಂಠಿ ಕೃಷಿಗೆ ಮೊದಲು ಉತ್ತಮ ಜಾಮೀನು ಆಯ್ಕೆ ಮಾಡಿಕೊಳ್ಳಬೇಕು.ಶುಂಠಿ ಮಣ್ಣಿನಲ್ಲಿರುವ ಪೋಷಕಾಂಶಗಳ ಹೀರುವ ಬೆಳೆಯಾಗಿದೆ.ಆದ್ದರಿಂದ ಮಣ್ಣು ಪರೀಕ್ಷೆ ಮಾಡಿಸಬೇಕು.ಮಣ್ಣಿನಲ್ಲಿ ಅತಿಹೆಚ್ಚು ಪೋಷಕಾಂಶ ,ಸಾವಯವ ಅಂಶ ಇರುವ ಭೂಮಿ ಸೂಕ್ತವಾಗಿದೆ. ಜೊತೆಗೆ ಜಮೀನಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದು ಒಂದೇ ಜಾಗದಲ್ಲಿ ನಿರಂತರವಾಗಿ ಬೆಳೆಯುವ ಬೆಳೆ ಅಲ್ಲ ಎಂದರು.
ಈ ಸಂದರ್ಭ ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ.ಕೆ.ವಸಂತ,ಶಿರಂಗಾಲ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಸವರಾಜು,ತಾಲ್ಲೂಕು ತಾಳೆ ಬೆಳೆ ಕ್ಷೇತ್ರ ಸಹಾಯಕ ಎಂ.ಕೆ.ಶಶಿಧರ್,ಸೋಮವಾರಪೇಟೆ ರೈತ ಉತ್ಪಾಕರ ಕಂಪನಿ ನಿರ್ದೇಶಕ ಎಚ್.ಪಿ.ಮಂಜುನಾಥ್,ಎಚ್.ಎಸ್.ಸುಂದರ, ಪ್ರಗತಿಪರ ರೈತರಾದ ಚಂದ್ರಶೇಖರ್,ಟಿ.ಜೆ.ಶೇಷಪ್ಪ, ಮಹೇಶ್ ಮರೂರು.ಟಿ.ಸಿ.ರಘನಾಥ,ಶುಂಠಿ ವ್ಯಾಪಾರಿ ಮಲ್ಲಿಕಾರ್ಜುನ,ನಿವೃತ್ತ ಸೈನಿಕ ಎಂ.ಎಸ್.ಶ್ರೀಧರ್ ಮುಖಂಡರಾದ ಡಿ.ಆರ್.ಶ್ರೀನಿವಾಸ್ ಮಣಜೂರು ಪಾಲ್ಗೊಂಡಿದ್ದರು. ನಂತರ ನಡೆದ ಸಂವಾದದಲ್ಲಿ ಶುಂಠಿ ಬೆಳೆಗೆ ಮಹಾಮಾರಿ,ಗೆಡ್ಡೆ ಕೊಳೆರೋಗ ಹಾಗೂ ಮಣ್ಣಿನ ಫಲವತ್ತತೆ, ರೋಗ ನಿಯಂತ್ರಣ, ಔಷಧಗಳ ಬಳಕೆ ಕುರಿತು ವಿಜ್ಞಾನಿಗಳು ರೈತರಿಗೆ ಜಾಗೃತಿ ಮೂಡಿಸಿದರು. ಇದೇ ಸಂದರ್ಭ ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸಲಾಯಿತು.