ಅರೆ-ಬರೆ ಜ್ಞಾನದ ಕಮಲ್ ಹಾಸನ್ ಹೇಳಿಕೆ ಖಂಡನೀಯ: ನಾಪಂಡ‌ ಮುತ್ತಪ್ಪ

ಅರೆ-ಬರೆ ಜ್ಞಾನದ  ಕಮಲ್ ಹಾಸನ್ ಹೇಳಿಕೆ ಖಂಡನೀಯ: ನಾಪಂಡ‌ ಮುತ್ತಪ್ಪ
ನಾಪಂಡ ಮುತ್ತಪ್ಪ

ಮಡಿಕೇರಿ:ತಮಿಳರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವ ಹೊಂದಿರುವುದು ತಪ್ಪಲ್ಲ! ಆದರೆ ಅದು ತನ್ನಷ್ಟೆ ಅಥವಾ ತನಗಿಂತ ಹೆಚ್ಚೆ ಶ್ರೀಮಂತಿಕೆ, ಪ್ರಾಚೀನತೆ ಹೊಂದಿರುವ ಭಾಷೆ ಮತ್ತು ಸಂಸ್ಕೃತಿಯನ್ನು ಕೇವಲವಾಗಿ ನೋಡುವುದು, ಕೀಳಾಗಿ ನೋಡುವುದು, ತನ್ನದೆ ಎಲ್ಲ, ತನ್ನಿಂದಲೆ ಇಡಿ ಜಗತ್ತು ಎಂಬ ಅಹಂ ಮತ್ತು ದುರಾಭಿಮಾನ ತೋರಿಸುವುದು ಮಾತ್ರ ಸಹಿಸುವಂತದಲ್ಲ ಎಂದು‌ ಕಾಂಗ್ರೆಸ್ ಮುಖಂಡ ಹಾಗೂ ಸಮಾಜ ಸೇವಕ ನಾಪಂಡ ಮುತ್ತಪ್ಪ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು,ಅಶೋಕನ ಶಾಸನಗಳಲ್ಲಿ ಸ್ಪಷ್ಟವಾಗಿ ಕನ್ನಡ ಪದಗಳನ್ನು ಗುರುತಿಸಲಾಗಿದೆ. ತಮಿಳರು ಅತ್ಯಂತ ಪ್ರಾಚೀನ ಎಂದು ಹೇಳಿಕೊಳ್ಳುವ ಸಿಂತಿಲವಾಸಿನ್ ( ಇದು ಬ್ರಾಹ್ಮೀ ಲಿಪಿಯಲ್ಲಿದೆ) ಗುಹೆಯ ಬಂಡೆ ಶಾಸನದಲ್ಲೂ ಕನ್ನಡ ಪದಗಳು ಸಾಕಷ್ಟು ಸಂಖ್ಯೆಯಲ್ಲಿವೆ.ಸಂಗಮ ಸಾಹಿತ್ಯ ಲಭ್ಯವಿರುವ ಕನ್ನಡ ಸಾಹಿತ್ಯಗಳಿಗಿಂತ ಹಳೆಯದು ಎಂದಾದರೂ ಅದು ಬರಹ ರೂಪದಲ್ಲಿ ಇರಲಿಲ್ಲ ಎಂಬುದು ಅಷ್ಟೆ ಸತ್ಯ.ಕನ್ನಡದ ಪ್ರಾಚೀನ ಶಾಸನಗಳಾದ ತಾಳಗುಂದ ಶಾಸನ, ತ್ಯಾಗರ್ಥಿ ಅಗ್ರಹಾರದ ಶಾಸನ, ಹಲ್ಮೀಡಿ ಶಾಸನಗಳಿಗಿಂತ ಪ್ರಾಚೀನ ಶಾಸನಗಳು ತಮಿಳಿನಲ್ಲಿ ಲಭ್ಯವಾಗಿಲ್ಲ.

ಕನ್ನಡ ಮತ್ತು ತಮಿಳು ಬಹುಷ್ಯಹ ಸಮಕಾಲೀನವಾಗಿ, ಸಮಾನಾಂತರವಾಗಿ ಬೆಳೆದು ಬಂದು ಇಂದು ಜಾಗತಿಕ ಮತ್ತು ಭಾರತೀಯ ಸಾಹಿತ್ಯಕ್ಕೆ ಮತ್ತು ಸಂಸ್ಕೃತಿಗೆ ತನ್ನದೆ ಆದ ಕೊಡುಗೆಗಳನ್ನು ನೀಡಿದೆ. ಕನ್ನಡನಾಡಿನ ದಕ್ಷಿಣ ಭಾಗವನ್ನು ಪಾಂಡ್ಯರು ಕೆಲವು ವರ್ಷಗಳಕಾಲ, ಚೋಳರು ಒಂದಷ್ಟು ಕಾಲ ಮತ್ತು ಕನ್ನಡಿಗರೆ ಆದ ಪಲ್ಲವರು ಹಲವು ದಶಕಗಳ ಕಾಲ ತಮಿಳು ನಾಡಿನಿಂದ ಆಳಿದರು. ತಮಿಳು ಪ್ರದೇಶವನ್ನು ಗಂಗರು, ಕದಂಬರು, ಬಾಣರು, ನೊಣಂಬರು, ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿಯ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರಿನ ಅರಸರು ಮುಂತಾದ ಕನ್ನಡ ಮನೆತನಗಳು ಆಳ್ವಿಕೆ ನಡೆಸಿವೆ.

ತಮಿಳು ನೆಲದಲ್ಲಿ ಕನ್ನಡಿಗರಾದ ಪಲ್ಲವರು, ಕಳಭ್ರರು, ಕೊಂಗರು ಮತ್ತು ಆಧುನಿಕ ಕಾಲಘಟ್ಟದಲ್ಲಿ ವಿಜಯನಗರದ ನಾಯಕರ ವಂಶಸ್ಥ ಪಾಳೆಗಾರರು ಆಡಳಿತ ನಡೆಸಿದ್ದಾರೆ.ತಮಿಳುನಾಡಿಗಿಂತಲೂ ವಿಶಾಲ ಭೂ ಪ್ರದೇಶವನ್ನು ವ್ಯಾಪಿಸಿಕೊಂಡಿರುವ ಕನ್ನಡನಾಡು ದೇಶದ ಸಂಸ್ಕೃತಿಗೆ, ಭಾಷೆಗಳ ಬೆಳವಣಿಗೆಗೆ ತನ್ನದೆ ಆದ ಕೊಡುಗೆ ನೀಡಿದೆ. ಜಗತಿನಲ್ಲಿಯೆ ಭವ್ಯ, ಪ್ರಾಚೀನ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವ ಕನ್ನಡಿಗರ ಸಂಸ್ಕೃತಿಯ ಬಗ್ಗೆ ಪದೆ ಪದೆ ತಮಿಳರು, ಹಿಂದಿವಾಲಾಗಳು ಮತ್ತು ಇತರರು ಅವಹೇಳನ ಮಾಡುವುದನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ.ಕಮಲ್ ಹಾಸನ್ ನೈಜ ಇತಿಹಾಸವನ್ನು ಅಧ್ಯಯನ ಮಾಡುವುದರ ಮೂಲಕ ಉತ್ಪ್ರೇಕ್ಷೆಯ ಅಜ್ಞಾನದಿಂದ ಹೊರಬರಬೇಕೆಂದು ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.