ಆಲೀರ ಕಪ್ ಕ್ರಿಕೆಟ್ :ಬೆಲಿಯತ್ ಕಾರಂಡ ಚಾಂಪಿಯನ್: ಆಲೀರ ಎ ತಂಡ ರನ್ನರ್ ಆಪ್
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಮಾಪಿಳ್ಳೆತೋಡುವಿನಲ್ಲಿ ಆಲೀರ ಕುಟುಂಬಸ್ಥರ ಗದ್ದೆಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಮೈದಾನದಲ್ಲಿ, ಕೊಡವ ಜಮ್ಮ ಮುಸ್ಲಿಂ ಸ್ಪೋರ್ಟ್ಸ್ ಅಯಿಂಡ್ ಕಲ್ಚರ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ 2 ನೇ ವರ್ಷದ ಕೊಡವ ಮುಸ್ಲಿಂ ಕುಟುಂಬ ತಂಡಗಳ ನಡುವಿನ ‘ಆಲೀರ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ವರ್ಣರಂಜಿತ ತೆರೆ ಎಳೆಯಲಾಯಿತು. ಎಂಟು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಕೊಡವ ಮುಸ್ಲಿಂ ಕುಟುಂಬಗಳ 70 ತಂಡಗಳು ಪಾಲ್ಗೊಂಡು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಿದವು.
ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸುಲಭ ಜಯಗಳಿಸುವ ಮೂಲಕ ಬೆಲಿಯತ್ ಕಾರಂಡ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು. ಆತಿಥೇಯ ಆಲೀರ ಎ ತಂಡ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಲೀರ ಎ ತಂಡ ನಿಗದಿತ 6 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 24 ರನ್ ಗಳ ಸಾಧಾರಣ ಮೊತ್ತ ಕಲೆ ಹಾಕಿತು. 25 ರನ್ ಗಳ ಗುರಿ ಬೆನ್ನಟ್ಟಿದ ಬೆಲಿಯತ್ ಕಾರಂಡ ತಂಡ ಕೇವಲ 3.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿತು.ಚಿನ್ನದ ನಾಣ್ಯ ಚಿಮ್ಮವ ಮೂಲಕ ಫೈನಲ್ ಪಂದ್ಯದ ಟಾಸ್ ಪ್ರಕ್ರಿಯೆಯನ್ನು ನೆರವೇರಿಸಿ, ಟಾಸ್ ಗೆದ್ದ ಬೆಲಿಯತ್ ಕಾರಂಡ ತಂಡದ ನಾಯಕ ಸೈಯದ್ ಅಶ್ರಫ್ ಅವರಿಗೆ ನೀಡಲಾಯಿತು.
ವೈಯಕ್ತಿಕ ಪ್ರಶಸ್ತಿ:
ಲೆಜೆಂಡ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ರಶೀದ್ ಕುಪೋಡoಡ, ಅಪ್ ಕಮಿಂಗ್ ಪ್ಲೇಯರ್ ಆಗಿ ಅಶು ಕನ್ನಡಿಯಂಡ, ಬೆಸ್ಟ್ ವಿಕೆಟ್ ಕೀಪರ್ ಆಗಿ ರಿಯಾಜ್ ಬೆಲಿಯಾತ್ ಕಾರಂಡ, ಬೆಸ್ಟ್ ಬೌಲರ್ ಆಗಿ ರವುಫ್, ಬೆಸ್ಟ್ ಫೀಲ್ಡರ್ ಆಗಿ ಸಂಶು ವೈಕೊಳಂಡ, ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಅಫ್ರೋಜ್ ಕಿಕ್ಕರೆ ಅಂಬಟ್ಟಿ, ಮ್ಯಾನ್ ಆಫ್ ದಿ ಮ್ಯಾಚ್ ಆಫ್ ದಿ ಮ್ಯಾಚ್ ಆಗಿ ರಶೀದ್ ಬೆಲಿಯತ್ ಕಾರಂಡ ಪ್ರಶಸ್ತಿ ಪಡೆದುಕೊಂಡರು. ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಯಾಗಿ ಉನೈಜ್ ಗೆ ಬೈಕ್ ನೀಡಲಾಯಿತು.ಕ್ರೀಡಾಕೂಟದ ಶಿಸ್ತುಬದ್ದ ತಂಡ ಪ್ರಶಸ್ತಿ ಯನ್ನು ಚಿಮ್ಮಚಿರ ಹಳ್ಳಿಗಟ್ಟು ತಂಡ ಪಡೆದುಕೊಂಡಿತ್ತು.ಆಲೀರ ಕ್ರಿಕೆಟ್ ಕ್ರೀಡಾಕೂಟದ ಪ್ರದರ್ಶನ ಪಂದ್ಯದಲ್ಲಿ ಮೊದಲ ಸ್ಥಾನ ಪಡೆದ ಪೋನ್ನಂಪೇಟೆ ಕಲ್ಲುಕೋರೆಯ ಕಾಟ್ರಕೊಲ್ಲಿ ಬ್ರದರ್ಸ್ ತಂಡಕ್ಕೆ ಟ್ರೋಫಿ ನೀಡಲಾಯಿತು.