ಎವೆಂಜರ್ಸ್ ಬಾಸ್ಕೆಟ್ ಬಾಲ್ ಸಮಾರೋಪ ಸಮಾರಂಭ: ಕೊಡಗು ಜಿಲ್ಲೆ ಎಲ್ಲಾ ಕ್ರೀಡೆಗಳಿಗೆ ವೇದಿಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆ: ಡಾ .ನಿತೀನ್

ವಿರಾಜಪೇಟೆ: ಕೊಡಗು ಜಿಲ್ಲೆಯ ಜನತೆಯು ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈ ನಿಟ್ಟಿನಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆಗೆ ಪ್ರೋತ್ಸಾಹ ಕಡಿಮೆ ಇದ್ದರು ಕೂಡ, ಇತ್ತೀಚಿನ ದಿನಗಳಲ್ಲಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಡಿ.ಕೊಚ್ ಸಂಸ್ಥೆ ಸಂಸ್ಥಾಪಕ ಡಾ. ನಿತೀನ್ ಅವರು ಅಭಿಪ್ರಾಯಪಟ್ಟರು.ಎವೆಂಜರ್ಸ್ ಬಾಸ್ಕೆಟ್ ಬಾಲ್ ಕ್ಲಬ್ ವಿರಾಜಪೇಟೆ ಆಶ್ರಯದಲ್ಲಿ ಹೊನಲು ಬೆಳಕಿನ ಕೊಡಗು ಬಾಸ್ಕೆಟ್ ಬಾಲ್ ಲೀಗ್ 2 ನೇ ಆವೃತ್ತಿಯು, ವಿರಾಜಪೇಟೆ ನಗರದ ಪ್ರಗತಿ ಆಂಗ್ಲ ಮಾದ್ಯಮ ಶಾಲಾ ಬಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ನಡೆಯಿತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ನಿತೀನ್ ಅವರು ಬಾಸ್ಕೆಟ್ ಬಾಲ್ ಕ್ರೀಡೆಯು ಕಲಾತ್ಮಕ ಶೈಲಿಯ ಆಟವಾಗಿದೆ. ಹೆಚ್ಚು ಹೆಚ್ಚು ಯುವ ಕ್ರೀಡಾ ಪಟುಗಳು ಕ್ರೀಡೆಯ ಬಗ್ಗೆ ಆಸಕ್ತಿ ತೋರುವಂತಾಗಬೇಕು. ಮತ್ತು ಆಸಕ್ತಿಯೊಂದಿಗೆ ಭಾಗವಹಸಿವಂತೆ ಪ್ರೇರೇಪಿಸಬೇಕು, ಇದರಿಂದ ಕ್ರೀಡೆಯ ಬಗ್ಗೆ ಒಲವು ಮೂಡುತ್ತದೆ ಎಂದರು.ಜಿಲ್ಲೆಯಲ್ಲಿರುವ ಬೆರಳೆಣಿಕೆಯಷ್ಟು ಮಂದಿ ಬಾಸ್ಕೆಟ್ ಬಾಲ್ ಕ್ರೀಡಾ ಪಟುಗಳು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದಲ್ಲಿ ತಮ್ಮ ಕ್ರೀಡಾ ಕೌಶಲ್ಯವನ್ನು ತೋರುತಿದ್ದಾರೆ. ಸ್ಥಳೀಯವಾಗಿ ಪಂದ್ಯಾವಳಿಗಳನ್ನು ಆಯೋಜಿಸಿದಲ್ಲಿ, ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವ ಜಿಲ್ಲೆಯ ಕ್ರೀಡಾ ಪಟುಗಳ ಪ್ರದರ್ಶನ ಇಲ್ಲಿ ಕಾಣಬಹುದು ಎಂದು ಹೇಳಿದರು.
ಜಿಲ್ಲೆಯ ಹಿರಿಯ ಬಾಸ್ಕೆಟ್ ಬಾಲ್ ಕ್ರೀಡಾಪಟು ಚಂದ್ರೀಮಾಡ ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ ಬೆರಳಣಿಕೆಯಷ್ಟು ಬಾಸ್ಕೆಟ್ ಬಾಲ್ ಕ್ರೀಡಾಂಗಣಗಳಿತ್ತು. ಆದರೆ ಇದೀಗ ಜಿಲ್ಲೆ 17 ಬಾಸ್ಕೆಟ್ ಬಾಲ್ ಕ್ರೀಡಾಂಗಣಗಳನ್ನು ಕಂಡಿವೆ. ಇದು ಉತ್ತಮ ಬೆಳೆವಣಿಗೆಯಾಗಿದೆ. ಯುವ ಸಮಿದಾಯಕ್ಕೆ ಕ್ರೀಡೆಯ ಮೇಲಿರುವ ಉತ್ಸಾಹವೇ ಇದಕ್ಕೆ ಕಾರಣ ಎನ್ನಬಹುದು. ಎವೆಂಜರ್ಸ್ ಕ್ಲಬ್ ಪಂದ್ಯಾಟಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಆಟಗಾರರಾದ ಲೋಹಿತ್ ಮಡಿಕೇರಿ ಮತ್ತು ಸೋನಂ ಕುಶಾಲನಗರ ಅವರನ್ನು ಆಯೋಜಕರ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಹಿರಿಯ ಕ್ರೀಡಾಪಟು ಸೋಮಯ್ಯ ಸಿ.ಎಸ್. ಅವರು ಮಾತನಾಡಿದರು, ಸಮಾಜ ಸೇವಕ ರವೂಫ್, ತಯ್ಯಾಬ್, ಝಬಿ ಮತ್ತು ಮಾದಂಡ ತಿಮ್ಮಯ್ಯ ಅವರುಗಳು ಉಪಸ್ಥಿತಿರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ