ಕುಶಾಲನಗರ: ಬೈಚನಹಳ್ಳಿಯ ಸ್ಮಶಾನ ಸಮಸ್ಯೆ ತಹಶೀಲ್ದಾರ್ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗೆದುಕೊಂಡ ನಿವಾಸಿಗಳು

ಕುಶಾಲನಗರ: ಬೈಚನಹಳ್ಳಿಯ ಸ್ಮಶಾನ ಸಮಸ್ಯೆ ತಹಶೀಲ್ದಾರ್ ಭರವಸೆ ಹಿನ್ನೆಲೆ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗೆದುಕೊಂಡ ನಿವಾಸಿಗಳು

ಕುಶಾಲನಗರ: ಬೈಚನಹಳ್ಳಿಯ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಜನರು ನೆಲೆ ನಿಂತಿದ್ದಾರೆ. ಆದರೆ ಇಲ್ಲಿ ಸ್ಮಶಾನದ ಸಮಸ್ಯೆ ತಲೆದೂರಿದೆ. ಇಂದಲ್ಲ ನಾಳೆ ಸ್ಮಶಾನಕ್ಕೆ ಜಾಗ ಸಿಗುತ್ತದೆ ಎಂದು ಇಲ್ಲಿನ ನಿವಾಸಿಗಳು ಕಾದು ಕುಳಿತ್ತಿದ್ದರು. ವರ್ಷಗಳು ಉರುಳಿದರೂ ಸ್ಮಶಾನಕ್ಕೆ ಮಾತ್ರ ಜಾಗವೇ ಸಿಗಲಿಲ್ಲ. ಇದರಿಂದ ಅಸಮಾಧಾನಗೊಂಡ ಜನತೆ ಸ್ಮಶಾನ ಜಾಗಕ್ಕೆ ಒತ್ತಾಯಿಸಿದರು. ಇದಕ್ಕೆ ಅಧಿಕಾರಿಗಳು ಮಣಿಯಲಿಲ್ಲ. ಹಾಗಾಗಿ ಅಹೋರಾತ್ರಿ ಧರಣಿಗೆ ನಿರ್ಧರಿಸಿದರು. ಇದರಿಂದ ಅಧಿಕಾರಿಗಳಿಗೆ ಕೊಂಚ ಬಿಸಿ ಮುಟ್ಟಿತು ಅನ್ನಿಸುತ್ತದೆ. ಬೈಚನಹಳ್ಳಿಯ ಜನತೆಯ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದರು. ಆದರೆ ಭರವಸೆ‌ ನಂಬದ ಜನತೆ ಬೈಚನಹಳ್ಳಿಯಿಂದ ಕುಶಾಲನಗರದ ಪುರಸಭೆ ಕಚೇರಿಯವರೆಗೆ ಮೆರವಣಿಗೆ ನಡೆಸಿ, ಧರಣಿ ಹೂಡಿದರು.‌ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವಂತೆ ಒತ್ತಾಯಿಸಿದರು. 

ಕಾರ್ಯನಿಮಿತ್ತ ಜಿಲ್ಲಾಧಿಕಾರಿಗಳು ಬಾರದಿದ್ದಾಗ ಕುಶಾಲನಗರ ತಹಶೀಲ್ದಾರರು ದೌಡಾಯಿಸಿದರು. ಧರಣಿ ಸ್ಥಳಕ್ಕೆ ಬಂದವರೆ ಧರಣಿ ನಿರತರ ಅಹವಾಲು ಆಲಿಸಿದರು. 

ಯಾವುದೇ ಜನವಸತಿ ಪ್ರದೇಶದಲ್ಲಿ ಕಸ ವಿಲೇವಾರಿಗೆ ಜಾಗ ಗುರುತಿಸುವುದು ಎಷ್ಟು ಮುಖ್ಯವೋ ಸ್ಮಶಾನಕ್ಕೆ ಜಾಗ ಗುರುತಿಸುವುದು ಅಷ್ಟೇ ಮುಖ್ಯ. ಬೈಚನಹಳ್ಳಿಯ 2/1 ರಲ್ಲಿ ಸ್ಮಶಾನಕ್ಕಾಗಿ‌52 ಸೆಂಟ್ ಜಾಗ ಗುರುತಿಸಿದ್ದೇವೆ. ಅದರ ಕಡತವನ್ನು ಸೋಮವಾರದ ಬಳಿಕ ನೀಡುವುದಾಗಿ ಹೇಳಿ ಧರಣಿ ಕೈ ಬಿಡುವಂತೆ ತಹಶೀಲ್ದಾರರು ಕಿರಣ್ ಗೌರಯ್ಯ ಮನವೊಲಿಸಿದರು. ಇದಕ್ಕೆ ಮಣಿದ ಧರಣಿ ‌ನಿರತರು ಸದ್ಯ ಸ್ಮಶಾನಕ್ಕೆ ಜಾಗ ಗುರುತಿಸಿಸುವುದಾಗಿ ತಹಶಿಲ್ದಾರರು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಧರಣಿ ಕೈ ಬಿಡಲು ನಿರ್ಧರಿಸಿದ್ದೇವೆ. ನಿಗಧಿತ ಅವಧಿಯಲ್ಲಿ ಸ್ಮಶಾನ ಜಾಗ ಗುರುತಿಸದಿದ್ದರೆ ಮುಂದಿನ‌ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪುರಸಭೆ ಸದಸ್ಯ ಜಗದೀಶ್ ಎಚ್ಚರಿಕೆ ನೀಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಬೈಚನಹಳ್ಳಿ ವ್ಯಾಪ್ತಿಯಲ್ಲಿ ಗೋಮಾಳ ಹಾಗೂ ಸರಕಾರಿ ಜಾಗವಿದ್ದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಅಂತಹ ಜಾಗಗಳ‌ನ್ನು ತೆರವುಗೊಳಿಸಿ ಸ್ಮಶಾನಕ್ಕೆ ಜಾಗ ಗುರುತಿಸಬೇಕು ಎಂದು ಹೇಳಿದರು. ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು ಸ್ಮಶಾನಕ್ಕೆ ಜಾಗ ಗುರುತಿಸಿಕೊಡುವರೇ ಕಾದು ನೋಡಬೇಕಿದೆ.