ಗೋಣಿಕೊಪ್ಪ ಜನತೆಯ ದಶಕಗಳ ಕನಸು ನನಸು: ಸದ್ಯದಲ್ಲೇ ಉದ್ಘಾಟನೆಗೊಳ್ಳಿದೆ ಗೋಣಿಕೊಪ್ಪ ನೂತನ ಬಸ್ಸು ತಂಗುದಾಣ
ಗೋಣಿಕೊಪ್ಪಲು :ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯನಗರಿ ಗೋಣಿಕೊಪ್ಪಲಿನಲ್ಲಿ ಬಸ್ ನಿಲ್ದಾಣ ಇಲ್ಲವೆಂಬ ಪ್ರಯಾಣಿಕರ ಬವಣೆ ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ. ನಗರದ ಜನರ ಬಸ್ ನಿಲ್ದಾಣದ ದಶಕಗಳ ಕನಸು ಸಾಕಾರಗೊಳ್ಳಲು ಕಾಲ ಸಮೀಪಿಸಿದೆ. ನಗರದಲ್ಲಿ ಬಸ್ ನಿಲ್ದಾಣವಿದೆಯಾದರೂ ಉಪಯೋಗಕ್ಕೆ ಬಾರದಂತಾಗಿತ್ತು. ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಹೆಚ್ಚು ನಿಲ್ಲುವುದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನಿಲ್ಲಲು ಸ್ಥಳವಾಕಾಶ ಇಲ್ಲದ ಕಾರಣ ಮುಖ್ಯ ರಸ್ತೆಯ ರಿಫಾಮರ್ಸ್ ಕ್ಲಬ್‌ನ ಮುಂಭಾಗದಲ್ಲಿ ಮೈಸೂರು, ಬೆಂಗಳೂರು, ಹಾಸನಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸ್ವಲ್ಪಸಮಯ ನಿಲುಗಡೆಗೊಳಿಸಿ, ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವಂತಹ ಅನಿವಾರ್ಯತೆ ಇತ್ತು.
ದೂರದೂರಿಗೆ ತೆರಳುವ ಪ್ರಯಾಣಿಕರು ಮಳೆ, ಗಾಳಿ, ಬಿಸಿಲೆನ್ನದೇ ರಸ್ತೆ ಬದಿಯಲ್ಲಿ ನಿಂತು ಬಸ್‌ಗಳಿಗೆ ಕಾಯುವಂತಹ ಪರಿಸ್ಥಿತಿ ಇತ್ತು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ತಾವು ಅಧಿಕಾರಕ್ಕೆ ಬಂದಲ್ಲಿ ಗೋಣಿಕೊಪ್ಪದಲ್ಲಿ ಬಸ್ ನಿಲ್ದಾಣ ನಿರ್ಮಿಸುವುದಾಗಿ ಶಾಸಕ ಎ.ಎಸ್.ಪೊನ್ನಣ್ಣ ಅವರು ಭರವಸೆ ನೀಡಿದ್ದರು. ನೀಡಿದ್ದ ಭರವಸೆಯಂತೆ ಶಾಸಕರಾಗಿ ಆಯ್ಕೆಯಾದ ಆರು ತಿಂಗಳಿನಲ್ಲಿ 2 ಕೋಟಿ ರೂಪಾಯಿಗಳ ಅನುದಾನವನ್ನು ತಂದು ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ನೂತನ ಬಸ್ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿ ಸಾಗುತ್ತಿದೆ. ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಬಸ್ ನಿಲ್ದಾಣ ಪ್ರಯಾಣಿಕರ ಉಪಯೋಗಕ್ಕೆ ದೊರಕಲಿದ್ದು, ಬಸ್ ನಿಲ್ದಾಣ ಇಲ್ಲವೆಂಬ ಕಪ್ಪುಚುಕ್ಕೆ ವಾಣಿಜ್ಯನಗರಿಯಿಂದ ಅಳಿಸಿಹೋಗಲಿದೆ.
ಒಂದು ತಿಂಗಳೊಳಗೆ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗುವುದು.ಇದೇ ಸಂದರ್ಭ ಕೆದಮುಳ್ಳೂರಿನಲ್ಲಿ ಬುಡಕಟ್ಟು ಸಮುದಾಯಕ್ಕೆ ಸುಮಾರು ನಲವತ್ತು ಮನೆಗಳ ಹಸ್ತಾಂತರದ ಜತೆಗೆ ವಿವಿಧ ಕಾರ್ಯಕ್ರಮಗಳ ಆಯೋಜಿಸುವ ಮೂಲಕ ರಾಜ್ಯಮಟ್ಟದ ನಾಯಕರನ್ನು ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗುವುದು.ಗೋಣಿಕೊಪ್ಪ ಬೈಪಾಸ್ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕ್ಯೂರಿಂಗ್ ಕೆಲಸ ನಡೆಯುತ್ತಿದ್ದು, ಒಂದು ವಾರದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ.ಗೋಣಿಕೊಪ್ಪ ಬೈಪಾಸ್ ರಸ್ತೆ ಹಾಗೂ ನೂತನ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೂರಿದ್ದು, ಬೈಪಾಸ್ ರಸ್ತೆ ಸಂಚಾರಕ್ಕೆ ಮುಕ್ತವಾದ ಮೇಲೆ ವಾಹನಗಳ ದಟ್ಟಣೆಗೆ ಸ್ವಲ್ಪ ಪ್ರಮಾಣದ ಬ್ರೇಕ್ ಬೀಳಲಿದೆ. ಬೈಪಾಸ್ ರಸ್ತೆ ಕಾಂಕ್ರೇಟೀಕರಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಕ್ಯೂರಿಂಗ್ ಕೆಲಸ ನಡೆಯುತ್ತಿದ್ದು, ಒಂದು ವಾರದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ.ಕೀರೆಹೊಳೆ ಸೇತುವೆಯನ್ನು ಅಗಲೀಕರಣಗೊಳಿಸಿದ್ದಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿದ್ದು, ಈ ಸಂಬಂಧ ಲೋಕೋಪಯೋಗಿ ಇಲಾಖಾಧಿಕಾರಿಗಳ ಜತೆ ಕಾಮಗಾರಿಯ ಕುರಿತು ಚರ್ಚಿಸಲಾಗುವುದೆಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಮಾಹಿತಿ ನೀಡಿದ್ದಾರೆ.
ವರದಿ:ಚೆಪ್ಪುಡಿರ ರೋಷನ್ ಪೊನ್ನಂಪೇಟೆ