ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ದಾಳಿ: ಟಿ.ಶೆಟ್ಟಿಗೇರಿಯಲ್ಲಿ ಹಬ್ಬದ ಹಸುವಿನ ಮೇಲೆ ಹುಲಿ ದಾಳಿ! ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿರುವ ಹಸು

ಟಿ.ಶೆಟ್ಟಿಗೇರಿ :-ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಗಬ್ಬದ ಹಸುವಿನ ಮೇಲೆ ಗುರುವಾರ ರಾತ್ರಿ ಹುಲಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಪ್ಪಚಂಗಡ ಬೋಪಯ್ಯ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಹಸು ಜೀವನ್ಮರಣ ಸ್ಥಿತಿಯಲ್ಲಿದೆ. ಪಶುವೈದ್ಯಾಧಿಕಾರಿ ಹಸುವಿಗೆ ಚಿಕಿತ್ಸೆ ನೀಡಿದ್ದಾರೆ.
ಈ ಸಂದರ್ಭ ಹಸುವಿನ ಮಾಲೀಕ ಅಪ್ಪಚಂಗಡ ಬೋಪಯ್ಯ ಮಾತನಾಡಿ, ಗುರುವಾರ ರಾತ್ರಿ ಒಂದು ಗಂಟೆಯ ಸಮಯದಲ್ಲಿ ಕೊಟ್ಟಿಗೆಯಿಂದ ಹುಲಿ ಘರ್ಜನೆ ಕೇಳಿಬರುತ್ತಿತ್ತು. ಮನೆಯಿಂದ ಹೊರಬರಲು ಧೈರ್ಯ ಸಾಲದೇ, ವಿದ್ಯುತ್ ದೀಪ ಹಾಗೂ ಟಾರ್ಚ್ ಬೆಳಗಿಸಿ ನೋಡಿದೆವು. ಬೆಳಗಿನ ಜಾವ ನೋಡಿದಾಗ ಹಸು ಏಳಲಾಗದೆ ತೀವ್ರವಾಗಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿಯೇ ಜೀವಂತವಾಗಿತ್ತು ಎಂದರು.
ಗ್ರಾಮಸ್ಥರಾದ ಅಪ್ಪಚಂಗಡ ಮೋಟಯ್ಯ ಮಾತನಾಡಿ, ಮಧ್ಯರಾತ್ರಿ ದೂರವಾಣಿ ಮೂಲಕ ಹುಲಿ ಬಂದಿರುವ ವಿಚಾರ ತಿಳಿಸಿದರೂ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ ಕಾರಣ ಈಗಾಗಲೇ ಈ ಹುಲಿಯಿಂದ ಎರಡು ಮೂರು ಜನರು ಮೃತಪಟ್ಟಿದ್ದಾರೆ. ಬೆಳಗಿನ ಜಾವ ಸ್ಥಳಕ್ಕೆ ತೆರಳಿ ವೀಕ್ಷಿಸಿದ್ದಾಗ ಗಬ್ಬದ ಹಸು ಇನ್ನೂ ಜೀವಂತವಾಗಿತ್ತು. ಸಂಕೇತ್ ಪೂವಯ್ಯ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಮೇರೆಗೆ ಪಶುವೈದ್ಯರನ್ನು ಕಳುಹಿಸಿದರು. ಹಸುವು ಸುಮಾರು 50 ರಿಂದ 60 ಸಾವಿರ ಬೆಲೆ ಬಾಳುತ್ತಿದ್ದು, ಚಿಕಿತ್ಸೆ ನೀಡಿದರು ಹಸು ಉಳಿಯುವ ಸ್ಥಿತಿಯಲ್ಲಿ ಇಲ್ಲ ಎಂದರು. ಈ ಗ್ರಾಮದಲ್ಲಿ ಸಂಜೆ 6 ರ ನಂತರ ಕರ್ಫ್ಯೂ ವಿಧಿಸಿದಂತಾಗುತ್ತದೆ. ಜನರು ಓಡಾಡಲು ಹಾಗೂ ಕಾರ್ಮಿಕರು ತೋಟಕ್ಕೆ ಕೆಲಸಕ್ಕೆ ತೆರಳಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳು ಕೂಡಲೇ ಸ್ಪಂದಿಸಿ ಹುಲಿ ಹಾವಳಿಗೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಹಸುವಿನ ಮಾಲೀಕರ ಮಗ ಸಿಬಿನ್ ಚಂಗಪ್ಪ ಮಾತನಾಡಿ, ಮಧ್ಯರಾತ್ರಿಯ ಸಮಯದಲ್ಲಿ ಹಸುವಿನ ಕಿರುಚಾಟ ಹಾಗೂ ಹುಲಿಯ ಗರ್ಜನೆ ಕೇಳಿ ನಿದ್ದೆಯಿಂದ ಎಚ್ಚೆತ್ತು ನೋಡಿದಾಗ ಹುಲಿ ದಾಳಿ ನಡೆಸಿರುವುದು ಗೊತ್ತಾಗಿದೆ. ಆರು ತಿಂಗಳ ಗಬ್ಬದ ಹಸುವಾಗಿದ್ದು ಸುಮಾರು 50ರಿಂದ 60 ಸಾವಿರ ಬೆಲೆ ಬಾಳುತ್ತದೆ ಎಂದರಲ್ಲದೇ, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ, ಪರಿಶೀಲಿಸಿದರು. ಹುಲಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಹಸುವಿನ ಮಾಲೀಕರ ಜೊತೆ ಹಾಗೂ ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಘಟನೆ ಕುರಿತು ಮಾಹಿತಿ ಪಡೆದರು. ಈ ಸಂದರ್ಭ ಮಾತನಾಡಿದ ಅವರು, ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 8 ರಿಂದ 10 ಹುಲಿಗಳು ಸಂಚಾರ ಮಾಡುತ್ತಿದ್ದು, ಹುಲಿಗಳನ್ನು ವೈಜ್ಞಾನಿಕವಾಗಿ ಅರವಳಿಕೆ ನೀಡಿ ಸೆರೆಹಿಡಿದು ಪುನರ್ವಸತಿ ಮಾಡುವ ಕಾರ್ಯ ನಡೆಯಬೇಕು. ಶಾಸಕ ಎ.ಎಸ್.ಪೊನ್ನಣ್ಣ ಅವರು ಅರಣ್ಯ ಸಚಿವರೊಂದಿಗೆ ಚರ್ಚಿಸಿ ಎರಡು ಹುಲಿಗಳ ಸೆರೆಗೆ ಅನುಮತಿ ಪಡೆದಿದ್ದಾರೆ. ಅರಣ್ಯ ಅಧಿಕಾರಿಗಳು ಜನರ ನಂಬಿಕೆಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ದೊರೆತಿರುವ ಅನುಮತಿಯನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಹುಲಿಗಳಿಗೆ ಅರವಳಿಕೆ ನೀಡಿ ಸೆರೆ ಹಿಡಿಯುವ ಕಾರ್ಯ ಆಗಬೇಕಾಗಿದೆ ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.
ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್ ಅವರು ಮಾತನಾಡಿ, ಹುಲಿ ದಾಳಿ ನಡೆಸಿದ ಮಾಹಿತಿ ತಿಳಿದ ಕೂಡಲೇ ಆರ್ ಆರ್ ಟಿ ಸಿಬ್ಬಂದಿಗಳು ಹಾಗೂ ಪಶು ವೈದ್ಯಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೀವ್ರವಾಗಿ ಗಾಯಗೊಂಡಿರುವ ಗಬ್ಬದ ಹಸುವಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಈ ವ್ಯಾಪ್ತಿಯಲ್ಲಿ ಹತ್ತು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, . ಹುಲಿಯನ್ನು ಸೆರೆಹಿಡಿಯಲು ಕೂಮಿಂಗ್ ಕಾರ್ಯಾಚರಣೆ ನಡೆಸಲಾಗುವುದೆಂದು ತಿಳಿಸಿದರು.
ಈ ಸಂದರ್ಭ ಪೊನ್ನಂಪೇಟೆ ಡಿ ಆರ್ ಎಫ್ ಓ ನಾಗೇಶ್, ಅರಣ್ಯ ಗಸ್ತು ಪಾಲಕ ಎಸ್ ಹನುಮೇಗೌಡ, ಮಣಿಕಂಠ, ಹಾಗೂ ಆರ್ ಆರ್ ಟಿ ಸಿಬ್ಬಂದಿಗಳಾದ ಸೇಶಾಂಕ್, ಶೈಲೇಶ್, ಪುನೀತ್, ಚಾಲಕರಾದ ಸಿಕಂದರ್, ಹರೀಶ್, ಅಪ್ಪಚಂಗಡ ಬಬಿನ್ ಬೆಳ್ಳಿಯಪ್ಪ ಮತ್ತಿತರರು ಇದ್ದರು.
ವರದಿ:ಚಂಪಾ ಗಗನ, ಪೊನ್ನಂಪೇಟೆ.