ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ: ಗಾಳಿ ಮಳೆಗೆ ಧರೆಗುಳಿದ ಮರಗಳು, ನದಿ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಗುಡುಗು ಸಹಿತ ಸುರಿದ ಭಾರಿ ಗಾಳಿ ಮಳೆಗೆ ಮರಗಳು ಧರೆಗುರುಳಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಕಳೆದ ಮೂರು ದಿನಗಳಿಂದ ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಗುಡುಗು,ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು ಶನಿವಾರ ಒಂದು ಇಂಚಿಗೂ ಅಧಿಕ ಮಳೆ ಸುರಿದಿದ್ದು ಅಲ್ಲಲ್ಲಿ ಮರಗಳು ಬಿದ್ದು ಅವಾಂತರ ಸೃಷ್ಟಿಸಿದೆ.
ನಾಪೋಕ್ಲು ಬಳಿಯ ಎಮ್ಮೆಮಾಡುವಿನಲ್ಲಿ ಶನಿವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಎಮ್ಮಮಾಡು ಗ್ರಾಮದಿಂದ ಕೂರುಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ಬಳಿಯಲ್ಲಿ ಬೃಹತ್ ಗಾತ್ರದ ಮರ ವಿದ್ಯುತ್ ತಂತಿಯ ಮೇಲೆ ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಅದರಂತೆ ನಾಪೋಕ್ಲು ಪಂಚಾಯಿತಿ ವ್ಯಾಪ್ತಿಯ ಹಳೇ ತಾಲೂಕಿನಿಂದ ಕುಂಬಾರಕೇರಿಗೆ ತೆರಳುವ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ನಾಪೋಕ್ಲು ವಿಭಾಗದಲ್ಲಿ ಹಗಲು ರಾತ್ರಿ ಉತ್ತಮ ಮಳೆಯಾಗುತ್ತಿದ್ದು, ವಿಭಾಗದಲ್ಲಿರುವ ಕಾವೇರಿ ನದಿ ಸೇರಿದಂತೆ ವಿವಿಧ ನದಿ ತೊರೆಗಳಲ್ಲಿ ನೀರಿನ ಪ್ರಮಾಣ ಅಲ್ಪಮಟ್ಟಕ್ಕೆ ಏರಿಕೆ ಕಂಡು ಬಂದಿದೆ. ಬಿಸಿಲ ಬೇಗೆ ಹೆಚ್ಚಾಗಿ ಕುಡಿಯುವ ನೀರಿಗೆ ಆಹಾಕಾರ ಎದುರಿಸುತ್ತಿದ್ದ ಜನರಿಗೆ ಕೆಲವು ದಿನಗಳಿಂದ ರಾತ್ರಿ ಹಗಲು ನಿರಂತರ ಮಳೆ ಸುರಿಯುತ್ತಿರುವುದರಿಂದ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಮಳೆಯಿಂದ ನಾಪೋಕ್ಲು ವಿಭಾಗದ ಅಲವೆಡೆ ಗ್ರಾಮಗಳಲ್ಲಿ ಮರದ ಕೊಂಬೆಗಳು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯೆಯ ಕೂಡ ಉಂಟಾಗಿದೆ.ಸೆಸ್ಕ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಶ್ರಮಪಟ್ಟು ವಿದ್ಯುತ್ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.