ಪತ್ರಿಕಾ ಕ್ಷೇತ್ರದ ಹಿರಿಯರಿಗೆ ಸನ್ಮಾನ :ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗೌರವ
ಮಡಿಕೇರಿ;ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ‘ಮನೆಯಂಗಳದಲ್ಲಿ ಹಿರಿಯ ಪತ್ರಕರ್ತರಿಗೆ ಮನದುಂಬಿದ ನಮನ’ ಕಾರ್ಯಕ್ರಮದಡಿ ಮಂಗಳವಾರ ಮೂವರು ಹಿರಿಯ ಪತ್ರಕರ್ತರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶನದಂತೆ ಹಿರಿಯ ಪತ್ರಕರ್ತ ವಿ.ಪಿ. ಸುರೇಶ್ ಅವರನ್ನು ಚಿತ್ತಾರ ವಾಹಿನಿ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಹಿರಿಯ ಪತ್ರಿಕೋದ್ಯಮಿ, ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರನ್ನು `ಶಕ್ತಿ’ ಕಚೇರಿಯಲ್ಲಿ ಮತ್ತು ಇನ್ನೋರ್ವ ಹಿರಿಯ ಪತ್ರಕರ್ತ ಬೈ.ಶ್ರೀ ಪ್ರಕಾಶ್ ಅವರನ್ನು, ಅವರ ಮನೆಯಲ್ಲೂ ಸನ್ಮಾನಿಸಲಾಯಿತು.
ಸುಮಾರು 50 ವರ್ಷಗಳಿಗೂ ಹೆಚ್ಚು ಕಾಲ ಸ್ಥಳೀಯ ಪತ್ರಿಕೆಗಳ ವರದಿಗಾರರಾಗಿ, `ಪರಾಕ್ರಮ’ ಸಂಜೆ ದೈನಿಕದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ವಿ.ಪಿ.ಸುರೇಶ್, ಪ್ರಸ್ತುತ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದಾರೆ. ಸನ್ಮಾನಕ್ಕೂ ಮುನ್ನ ಸುರೇಶ್, ಪತ್ರಿಕೋದ್ಯಮದ ತಮ್ಮ ಅನುಭವಗಳು ಹಾಗೂ ಏಳುಬೀಳುಗಳನ್ನು ಹಂಚಿಕೊಂಡರು.
`ಶಕ್ತಿ’ ಪ್ರಧಾನ ಸಂಪಾದಕರಾದ ಜಿ ರಾಜೇಂದ್ರ, ತಮ್ಮ ತಂದೆಯಿಂದ ಬಳುವಳಿಯಾಗಿ ಬಂದ ಪತ್ರಿಕೋದ್ಯಮದಲ್ಲಿ ಕಳೆದ 60ಕ್ಕೂ ಹೆಚ್ಚು ವರ್ಷ ಪತ್ರಿಕೆಯನ್ನು ಮುನ್ನಡೆಸಿದ ಅನುಭವನ್ನು ಹಂಚಿಕೊಂಡರು. ಪತ್ರಕರ್ತನಾದವನು ಕಾರ್ಯತತ್ಪರತೆ, ಸಾಮಾಜಿಕ ಕಾಳಜಿ, ಬದ್ಧತೆಯಿಂದ ಕೆಲಸ ಮಾಡಬೇಕೆಂದು ರಾಜೇಂದ್ರ ಕಿವಿಮಾತು ಹೇಳಿದರು.
ಅನೇಕ ಪತ್ರಿಕೆಗಳಲ್ಲಿ ವರದಿಗಾರರಾಗಿದ್ದ ಬೈ.ಶ್ರೀ. ಪ್ರಕಾಶ್, ಮುದ್ರಣ ಯಂತ್ರ ಪರಿಚಯವಾಗುವುದಕ್ಕೂ ಮುನ್ನ, ಅಚ್ಚುಮೊಳೆಯ ಕಾಲಘಟ್ಟದಲ್ಲಿ ಹರಸಾಹಸದಿಂದ ಪತ್ರಿಕೆಗಳನ್ನು ಹೊರತರುತ್ತಿದ್ದ ಬಗ್ಗೆ ವಿವರಿಸಿದರು. ಹಿಂದಿಗಿಂತಇಂದು ವರದಿಗಾರಿಕೆ ಸುಲಭವಾಗಿದ್ದರೂ, ಎಲ್ಲವನ್ನೂ ಪರಾಂಬರಿಸಿ ಸುದ್ದಿ ಮಾಡಬೇಕಾದ ಪ್ರಮೇಯವಿದೆ. ತಪ್ಪಿದರೆ ಕಾನೂನಿನ ತೊಡಕು ಎದರುರಾಗಬಹುದು ಎಂದು ಅವರು ಹೇಳಿದರು.
ಮೂವರು ಸಾಧಕರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸಲಾಯ್ತು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ ಆರ್ ಸವಿತಾ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ, ಉಪಾಧ್ಯಕ್ಷ ಸುವರ್ಣ ಮಂಜು, ಖಜಾಂಚಿ ಆನಂದ್ ಕೊಡಗು, ಕಾರ್ಯದರ್ಶಿ ಜಿ.ಪ್ರೇಮ್ ಕುಮಾರ್, ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟಿ, ಕಾರ್ಯಕ್ರಮದ ಸಂಚಾಲಕರುಗಳಾದ ವಿಷ್ಮಾ ಪೆಮ್ಮಯ್ಯ, ಬೊಳ್ಳಜಿರ ಅಯ್ಯಪ್ಪ, ನಿರ್ದೇಶಕರಾದ ನವೀನ್ ಸುವರ್ಣ, ಸ್ಟ್ಯಾನ್ಲಿ ಡೇವಿಡ್, ಮಲ್ಲಿಕಾರ್ಜುನ್, ಪ್ರಭುದೇವ್, ರಿಜ್ವಾನ್ ಹುಸೇನ್, ಸದಸ್ಯ ಸಂತೋಷ್ ರೈ, ವಿನೋದ್, ಶಕ್ತಿ ಸಂಪಾದಕ ಜಿ ಚಿದ್ವಿಲಾಸ್, ಪುರುಷೋತ್ತಮ್ ಬಂಗಾರುಕೋಡಿ, ಉಮೇಶ್ ಕುಂಬಳಚೇರಿ, ಅಬ್ದುಲ್ ಕಲಾಂ ಬಡಾವಣೆ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೌಸರ್ ಮತ್ತಿತರರು ಹಾಜರಿದ್ದರು.