ಪೆರುಂಬಾರಿ: ವಸತಿ ಶಾಲೆಯ ನಿರ್ಮಾಣ ಹಂತದ ತಡೆಗೋಡೆ ಕುಸಿತ

ವಿರಾಜಪೇಟೆ: ಎರಡು ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ನಿರ್ಮಾಣ ಹಂತದಲ್ಲಿದ್ದ ತಡೆಗೋಡೆ ಕುಸಿತ ಕಂಡಿರುವ ಘಟನೆ ವಿರಾಜಪೇಟೆ ಹೊರವಲಯ ಆರ್ಜಿ ಪೆರುಂಬಾಡಿ ಗ್ರಾಮದಲ್ಲಿ ನಡೆದಿದೆ.
ವಿರಾಜಪೇಟೆ ತಾಲೂಕು ಆರ್ಜಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಂದನೇ ಪೆರುಂಬಾಡಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯ ಮೈದಾನದ ನಿರ್ಮಾಣ ಹಂತದ ತಡೆಗೋಡೆ ಮಳೆಯಿಂದಾಗಿ ಕುಸಿತ ಕಂಡಿದೆ. ಎಡಬಿಡದೆ ಸತತ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಡೆಗೋಡೆ ಕುಸಿದಿದೆ. ಮೈದಾನಕ್ಕೆ ಹೊರ ಸ್ಥಳದಿಂದ ಮೈದಾನ ನಿರ್ಮಾಣ ಮಾಡಲು ಭಾರಿ ಪ್ರಮಾಣದಲ್ಲಿ ಮಣ್ಣು ಸುರಿದು ಸಮತಟ್ಟು ಮಾಡಲಾಗಿತ್ತು. ಮಣ್ಣು ಸವೆಯದಂತೆ ಸುಮಾರು ೩೦ ಅಡಿ ಎತ್ತರದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಸಾಗಿದೆ. ಈ ವೇಳೆ ಮಳೆಯಿಂದಾಗಿ ಮಣ್ಣಿನಲ್ಲಿ ನೀರು ಸಂಗ್ರಹಗೊಂಡು, ಸಡಿಲಗೊಂಡು ತಡೆಗೋಡೆ ಕುಸಿದಿದೆ. ನಿರ್ಮಿತಿ ಕೇಂದ್ರ ವತಿಯಿಂದ ತಡೆಗೋಡೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದರು. ಕುಸಿತ ಕಂಡ ತಡೆಗೋಡೆಯ ಅವಶೇಷಗಳು ಸಮೀಪದ ಕಾಫಿ ತೋಟಕ್ಕೆ ತೆರಳುವ ಮಾರ್ಗಕ್ಕೆ ಅಡ್ಡಲಾಗಿ ಬಿದ್ದಿದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ವಸತಿ ಶಾಲೆ ಪ್ರಭಾರ ಪ್ರಾಂಶುಪಾಲರಾದ ಪುಟ್ಟುಸ್ವಾಮಿ, ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿದಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.ಸ್ಥಳಕ್ಕೆ ಆರ್ಜಿ ಗ್ರಾಮ ಪಂಚಾಯತಿ ಪಿ.ಡಿ.ಒ. ಪ್ರಮೋದ್ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಕಿಶೋರ್ ಕುಮಾರ್ ಶೆಟ್ಟಿ.