ಪೊನ್ನಂಪೇಟೆ: ತಾಲೂಕಿನ ಬಲ್ಯಮಂಡೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ: ಅಭಿವೃದ್ಧಿಯೇ ನನ್ನ ಮೊದಲ ಮಂತ್ರ: ಶಾಸಕ ಎ.ಎಸ್ ಪೊನ್ನಣ್ಣ

ಪೊನ್ನಂಪೇಟೆ :ತಾಲೂಕಿನ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆ ಹಾನಿಯಿಂದ ಹದಗೆಟ್ಟಿರುವ ಹರಿಹರ ಹಾಗೂ ತಾವರೆಕೆರೆ ಸಂಪರ್ಕ ರಸ್ತೆ, ಚಿಕ್ಕಮುಂಡೂರು ಹಾಗೂ ಕೋಣಂಗೇರಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ಭೂಮಿಪೂಜೆ ನೆರವೇರಿಸಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ರಸ್ತೆಗಳ ಮರು ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮಳೆ ಹಾನಿಯಿಂದ ಹದಗೆಟ್ಟಿರುವ ರಸ್ತೆ ಕಾಮಗಾರಿಗಳಿಗೆ 10 ಕೋಟಿ ರೂಪಾಯಿಗಳ ಅನುದಾನದಲ್ಲಿ ಬಲ್ಯಮಂಡೂರು ಭಾಗದಲ್ಲಿ 20 ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಭೂಮಿಪೂಜೆ ನೆರವೇರಿಸಲಾಗಿದೆ. ಹರಿಹರ ಮತ್ತು ತಾವರೆಕೆರೆ ಸಂಪರ್ಕ ರಸ್ತೆ ಹಾಗೂ ಚಿಕ್ಕಮಂಡೂರು ಹಾಗೂ ಕೋಣಂಗೇರಿ ಸಂಪರ್ಕ ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳ್ಳಲಿದೆ ಎಂದರು.
ಇದೇ ಸಂದರ್ಭ ಸ್ಥಳೀಯ ಗ್ರಾಮಸ್ಥರ ಕೋರಿಕೆಯಂತೆ ಚಂಡಂಗಡ, ಉಪ್ಪಂಗಡ, ಅಚ್ಚಾರಮಾಡ, ದೇಯಂಡ ಕುಟುಂಬಸ್ಥರ ಮನೆಗಳಿಗೆ ತೆರಳುವ ತೀರಾ ಹದಗೆಟ್ಟಿರುವ ಹಿಡಿಗೇರಿ ರಸ್ತೆಯನ್ನು ಶಾಸಕರು ವೀಕ್ಷಿಸಿದರು.
ಚಂಡಂಗಡ ಕುಟುಂಬಸ್ಥರ ದೇವರಾದ ಮಂದಣ್ಣ ಮೂರ್ತಿ ದೇವಸ್ಥಾನಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿದರು. ಈ ಸಂದರ್ಭ ಚಂಡಂಗಡ ಪ್ರವೀಣ್ ಅವರು ದೇವಸ್ಥಾನದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. ದೇವಸ್ಥಾನದ ಅಭಿವೃದ್ಧಿಗೆ ವೈಯಕ್ತಿಕವಾಗಿ ಆರ್ಥಿಕ ಸಹಕಾರ ಒದಗಿಸುವುದಾಗಿ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಈ ಸಂದರ್ಭ ಬಲ್ಯಮಂಡೂರು ಕಾಂಗ್ರೆಸ್ ವಲಯ ಅಧ್ಯಕ್ಷರಾದ ಕೊಟ್ಟಂಗಡ ರಾಜ ಕಾರ್ಯಪ್ಪ, ಕಾಂಗ್ರೆಸ್ ಹಿರಿಯ ಮುಖಂಡರಾದ ಪೊನ್ನಪ್ಪ, ದೆಯಂಡ ಲಾಲ ತಮ್ಮಯ್ಯ, ಸಂತೋಷ್, ಕೊಟ್ಟಂಗಡ ಡಿಕ್ಕಿ, ಕಟ್ಟಿ, ಪಿ ಪ್ರಕಾಶ್, ಸೂರಜ್, ಮಧು, ಚಂಡoಗಡ ಪ್ರವೀಣ್, ಪೆಮ್ಮಂಡ ಮಂಜು ಬೋಪಣ್ಣ, ಅಚಾರಮಾಡ ಜಾರೀಶ್ ಹಾಗೂ ಗ್ರಾಮಸ್ಥರು, ಪಕ್ಷದ ಪ್ರಮುಖರು ಹಾಜರಿದ್ದರು.
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ